ಚುನಾವಣೆ ಅಕ್ರಮ ತಡೆಗೆ ಸಿ-ವಿಜಿಲ್ ಆ್ಯಪ್ ಬಿಡುಗಡೆ: ಡಾ. ಸುಶೀಲಾ

| Published : Apr 08 2024, 01:03 AM IST

ಚುನಾವಣೆ ಅಕ್ರಮ ತಡೆಗೆ ಸಿ-ವಿಜಿಲ್ ಆ್ಯಪ್ ಬಿಡುಗಡೆ: ಡಾ. ಸುಶೀಲಾ
Share this Article
  • FB
  • TW
  • Linkdin
  • Email

ಸಾರಾಂಶ

ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶ ಹೊಂದಿರುವ ಚುನಾವಣಾ ಆಯೋಗವು ಚುನಾವಣಾ ಸಮಯದಲ್ಲಿ ನಡೆಯುವ ಅಕ್ರಮಗಳ ಪತ್ತೆಗೆ ಹಾಗೂ ತಡೆಗೆ ಸಿ ವಿಜಲ್ ಆ್ಯಪ್ ಬಿಡುಗಡೆಮಾಡಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶ ಹೊಂದಿರುವ ಚುನಾವಣಾ ಆಯೋಗವು ಚುನಾವಣಾ ಸಮಯದಲ್ಲಿ ನಡೆಯುವ ಅಕ್ರಮಗಳ ಪತ್ತೆಗೆ ಹಾಗೂ ತಡೆಗೆ ಸಿ ವಿಜಲ್ ಆ್ಯಪ್ ಬಿಡುಗಡೆಮಾಡಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ಹಾಕುವಂತೆ ಆಮಿಷಗಳನ್ನು ಒಡ್ಡಿದರೆ, ಹಣ, ಉಡುಗೊರೆ, ಕೂಪನ್‌ಗಳನ್ನು ವಿತರಣೆ, ಮದ್ಯದ ಆಸೆ ಮತದಾರರು ಸಿ ವಿಜಿಲ್ ಆ್ಯಪ್ ಮೂಲಕ ದೂರು ನೀಡಬಹುದು. ಜತೆಗೆ ಮತದಾರರಿಗೆ ಅನುಮತಿ ಇಲ್ಲದಿದ್ದರೂ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಂಟಿಸುವುದು, ಬಂದೂಕು ತೋರಿಸಿ ಬೆದರಿಕೆ ಹಾಕುವುದು, ಆಸ್ತಿ ವಿರೂಪಗೊಳಿಸುವುದು, ಧಾರ್ಮಿಕ ಅಥವಾ ಕೋಮು ಪ್ರಚೋದಿತ ಭಾಷಣ ಮಾಡಿದರೂ ಆ್ಯಪ್ ಮೂಲಕ ದೂರು ನೀಡಬಹುದು ಎಂದರು.

ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧವಿದ್ದರೂ ಪ್ರಚಾರ ಮಾಡುವುದು, ಮತದಾನದ ದಿನ ವಾಹನಗಳಲ್ಲಿ ಮತದಾರರನ್ನು ಕರೆತಂದು ಪ್ರಲೋಭನೆಗೊಳಿಸುವುದು, ಮತ ಹಾಕುವಂತೆ ಬೆದರಿಸುವುದು ಹಾಗೂ ನೀತಿ ಸಂಹಿತೆ ಪ್ರಕರಣಗಳು ಕಂಡು ಬಂದರೂ ಸಿ ವಿಜಿಲ್ ಆ್ಯಪ್‌ನಲ್ಲಿ ದೂರು ಸಲ್ಲಿಸಲು ಅವಕಾಶವಿದೆ ಎಂದರು.

ಸಿ ವಿಜಲ್ ಮೂಲಕ ಸಲ್ಲಿಕೆಯಾಗುವ ದೂರುಗಳಿಂದ ಘಟನೆ ನಡೆದ ಸ್ಥಳದ ಮಾಹಿತಿ ಲಭ್ಯವಾಗುವುದರಿಂದ ಪ್ರಕರಣ ನಡೆದ ಸ್ಥಳಕ್ಕೆ ಅಧಿಕಾರಿಗಳು ತಲುಪಬಹುದು. ಸಾರ್ವಜನಿಕರು ಪ್ಲೇ ಸ್ಟೋರ್‌ನಲ್ಲಿ ಸಿ ವಿಜಿಲ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಬಳಸಬಹುದು. ಅಕ್ರಮಗಳ ಕುರಿತು ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು. ದೂರು ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.

ಸಿ ವಿಜಿಲ್‌ನಲ್ಲಿ ದಾಖಲಾಗುವ ದೂರುಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಕಚೇರಿ, ಎಲ್ಲಾ ಚುನಾವಣೆ ಕ್ಷೇತ್ರಗಳ ಚುನಾವಣಾಧಿಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಮತದಾನ ಮುಕ್ತಾಯವಾಗುವರೆಗೂ 3 ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ದೂರು ದಾಖಲಾದ ಕೂಡಲೇ ಪರಿಶೀಲಿಸಿ ದೂರು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ಲೆಯಿಂಗ್ ಸ್ಕ್ವಾಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ರವಾನಿಸಿ ದೂರಿನ ಕುರಿತು ತುರ್ತು ಕ್ರಮ ವಹಿಸುವಂತೆ ನೋಡಿಕೊಳ್ಳಲಾಗುತ್ತದೆ.

ಗರಿಷ್ಠ 100 ನಿಮಿಷಗಳ ಒಳಗೆ ದೂರುಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಸಾರ್ವಜನಿಕರು ಸಿ ವಿಜಿಲ್ ಆ್ಯಪ್ ಮಾತ್ರವಲ್ಲದೆ ಉಚಿತ ಸಹಾಯವಾಣಿ ಸಂಖ್ಯೆ 1950ಗೆ ಕರೆಮಾಡಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದು. ಈ ಮೂಲಕ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲು ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಬಹುದಾಗಿದೆ ಎಂದರು.

ವಿಹೆಚ್‌ಎ ಆ್ಯಪ್: ವೋಟರ್ ಹೆಲ್ಪ್‌ಲೈನ್‌ ಆ್ಯಪ್

ಈ ಆ್ಯಪ್‌ದಿಂದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಬಹುದು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ನಮೂನೆ-6ನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು ಹಾಗೂ ಹೆಸರು, ವಿಳಾಸ, ಭಾವಚಿತ್ರ, ಲಿಂಗ ಏನಾದರೂ ತಿದ್ದುಪಡಿ ಮಾಡಬೇಕಾದ್ದಲ್ಲಿ ನಮೂನೆ-8ನ್ನು ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು. ನಿಮ್ಮ ಡಿಜಿಟಲ್ (ಭಾವಚಿತ್ರವುಳ್ಳ) ವೋಟರ್ ಸ್ಲೀಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಚುನಾವಣೆ ಸಂಬಂಧಿತ ಅಪ್‌ಡೇಟೆಡ್ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರು ತಿಳಿಸಿದ್ದಾರೆ.