ಸಾರಾಂಶ
ಬೆಂಗಳೂರು : ಬಾಳು ಕೊಡುವುದಾಗಿ ನಂಬಿಸಿ ಕೆಲ ದಿನ ಜತೆಯಲ್ಲಿ ಇದ್ದು ಈಗ ಕೈಕೊಟ್ಟು ಹೋಗಿದ್ದಾನೆ ಎಂದು ಪ್ರಿಯಕರನ ವಿರುದ್ಧ ಆರೋಪಿಸಿರುವ ವಿವಾಹಿತ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಕೆಂಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಿತ್ರದುರ್ಗ ಮೂಲದ, ನಗರದ ಹರ್ಷಲೇಔಟ್ ನಿವಾಸಿ ಭೈರವಿ ಎಂಬಾಕೆ ಮಂಡ್ಯ ಮೂಲದ, ನಗರದ ಕೆಂಗೇರಿ ನಿವಾಸಿ ಕ್ಯಾಬ್ ಚಾಲಕ ಪ್ರಜ್ವಲ್ ಎಂಬಾತನ ವಿರುದ್ಧ ಮೋಸದ ಆರೋಪ ಮಾಡಿದ್ದಾರೆ. ಈ ಸಂಬಂಧ ಇಬ್ಬರನ್ನು ಕರೆಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಮಹಿಳೆ ಆರೋಪವೇನು?:
ಚಿತ್ರದುರ್ಗ ಮೂಲದ ಭೈರವಿ 13 ವರ್ಷದ ಹಿಂದೆ ಕರಿಯಣ್ಣ ಎಂಬುವವರನ್ನು ಮದುವೆಯಾಗಿದ್ದು, ದಂಪತಿಗೆ 12 ಮತ್ತು 10 ವರ್ಷದ ಇಬ್ಬರು ಮಕ್ಕಳು ಇದ್ದಾರೆ. ಪತಿ ಕರಿಯಣ್ಣ ಮದ್ಯ ವ್ಯಸನಕ್ಕೆ ಬಿದ್ದು ನಿತ್ಯ ಕಿರುಕುಳ ನೀಡುತ್ತಿದ್ದ. ಹಿಂಸೆ ಸಹಿಸಲಾಗದೆ ಪತಿಯನ್ನು ತೊರೆದ ಭೈರವಿ ತವರು ಮನೆಗೆ ಸೇರಿದ್ದರು. ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಮಗನನ್ನು ಹಾಸ್ಟೆಲ್‌ಗೆ ಸೇರಿಸಿ, ಮಗಳನ್ನು ತವರು ಮನೆಗೆ ಬಿಟ್ಟಿದ್ದಾರೆ. ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿರುವ ಭೈರವಿ, ಪೆಟ್ರೋಲ್ ಬಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಕೆಂಗೇರಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸ್ನೇಹಿತೆಯರ ಜತೆಗೆ ನೆಲೆಸಿದ್ದರು.
ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ:
ಈ ನಡುವೆ ರೀಲ್ಸ್ ವಿಡಿಯೋ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಭೈರವಿ, ರೀಲ್ಸ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಈಕೆಯ ರೀಲ್ಸ್ ನೋಡುತ್ತಿದ್ದ ಕ್ಯಾಬ್ ಚಾಲಕ ಪ್ರಜ್ವಲ್, ಲೈಕ್, ಕಾಮೆಂಟ್ ಮುಖಾಂತರ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಬಳಿಕ ಇಬ್ಬರಿಗೂ ಪರಿಚಯವಾಗಿ ಮೊಬೈಲ್ ಸಂಖ್ಯೆ ಪಡೆದುಕೊಂಡು ಪರಸ್ಪರ ಕಾಲ್, ಮೆಸೇಜ್ ಮಾಡಿ ಆತ್ಮೀಯರಾಗಿದ್ದಾರೆ.
ಈ ವೇಳೆ ಭೈರವಿ ತನಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇರುವ ವಿಚಾರವನ್ನು ಪ್ರಜ್ವಲ್‌ಗೆ ಹೇಳಿಕೊಂಡಿದ್ದಾರೆ. ಆದರೂ ಬಾಳು ಕೊಡುವುದಾಗಿ ಪ್ರಜ್ವಲ್ ಹೇಳಿದ್ದಾನೆ. ಬಳಿಕ ಭೈರವಿ ಮತ್ತು ಪಜ್ವಲ್ ಒಂದೇ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾರೆ. ಕೆಲ ದಿನಗಳಿಂದ ಪ್ರಿಯಕರ ಪ್ರಜ್ವಲ್ ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದಾನೆ. ಸಂಪರ್ಕಕ್ಕೂ ಸಿಗದೆ ಮೋಸ ಮಾಡಿದ್ದಾನೆ ಎಂದು ಭೈರವಿ ಆರೋಪಿಸಿದ್ದಾರೆ.
ಮದುವೆ ವಿಚಾರ ಮುಚ್ಚಿಟ್ಟು ಲವ್
ಭೈರವಿ ನನಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪರಿಚಿತರಾಗಿದ್ದಳು. ತನಗೆ ಮದುವೆಯಾಗಿ ಮಕ್ಕಳಿರುವ ವಿಚಾರವನ್ನು ಮುಚ್ಚಿಟ್ಟಿದ್ದಳು. ಈ ವಿಚಾರ ಗೊತ್ತಾದ ಬಳಿಕ ಮೊದಲ ಗಂಡನಿಗೆ ಕಾನೂನುಬದ್ಧವಾಗಿ ವಿಚ್ಛೇದನ ಕೊಡು. ಬಳಿಕ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದೆ. ಗಂಡನಿಂದ ವಿಚ್ಛೇದನ ಪಡೆದು ಬರುವುದಾಗಿ ಹೇಳಿ ಹೋಗಿದ್ದ ಭೈರವಿ, ನೇರ ಮಾಧ್ಯಮಗಳ ಎದುರು ಬಂದು ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಪ್ರಜ್ವಲ್ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾನೆ.