ಸಾರಾಂಶ
ಗುಂಡ್ಲುಪೇಟೆ ನೂರತ್ತು ಕೆರೆ ಯೋಜನೆಗೆ ಒಪ್ಪಿಗೆ ಸಿಗುತ್ತಾ? ಎಂದು ಕನ್ನಡಪ್ರಭ ಏ.೨೩ ರಂದು ಪ್ರಕಟಿಸಿತ್ತು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಥಮ ಭಾರಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಘೋಷಣೆಯಾಗಿರುವ ಹಿಂದೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಶ್ರಮ ಪ್ರಯತ್ನ ಅಡಗಿದೆ.ಕಳೆದ ಮಾ.೭ರಂದು ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ನೂರತ್ತು ಕೆರೆ, ಕಟ್ಟೆಗಳ ನೀರಿನ ಯೋಜನೆ ಘೋಷಣೆ ಆಗುತ್ತಾ? ಎಂದು ಕನ್ನಡಪ್ರಭ ಮಾ.೭ ರ ಪತ್ರಿಕೆಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಬಜೆಟ್‌ನಲ್ಲಿ ಘೋಷಣೆ ಆಗಲ್ಲ, ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಆಗುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿಕೊಂಡಿದ್ದರು. ಏ.೨೩ರ ಕನ್ನಡಪ್ರಭ ಪತ್ರಿಕೆಯಲ್ಲಿ ನೂರತ್ತು ಕೆರೆ ಯೋಜನೆಗೆ ಒಪ್ಪಿಗೆ ಸಿಗುತ್ತಾ? ಎಂದು ವರದಿ ಪ್ರಕಟಿಸಿತ್ತು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪತ್ರಿಕೆಗೆ ಪ್ರತಿಕ್ರಿಯಿಸಿ ಖಂಡಿತ ಘೋಷಣೆ ಆಗಲಿದೆ ಎಂದು ಖಚಿತವಾಗಿ ಹೇಳಿದ್ದರು.ಏ.೨೪ ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಸುದ್ದಿಗೋಷ್ಠಿಯಲ್ಲಿ ಗುಂಡ್ಲುಪೇಟೆ ಕೆರೆ, ಕಟ್ಟೆ ಯೋಜನೆಗೆ ಅನುಮತಿ ನೀಡಲಾಗಿದೆ. ಈ ಯೋಜನೆಯ ಅಂದಾಜು ವೆಚ್ಚ ೪೮೫ ಕೋಟಿ ಎಂದು ಹೇಳುವ ಮೂಲಕ ಶಾಸಕರ ಹಾಗೂ ಕನ್ನಡಪ್ರಭದ ನಿರೀಕ್ಷೆಯಂತೆಯೇ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ.
ಇಂಥ ದೊಡ್ಡ ಯೋಜನೆಗೆ ಅನುಮತಿ ಕೊಡಿಸೋದು ಸುಲಭದ ಮಾತಲ್ಲ, ಮುಖ್ಯಮಂತ್ರಿಗಳ ಆಪ್ತ ಬಳಗದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಇರುವ ಕಾರಣ ಸಲುಗೆಯಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಂಕಲ್ ನೂರತ್ತು ಕೆರೆ, ಕಟ್ಟೆ ಯೋಜನೆಗೆ ಅನುಮತಿ ಕೊಡಬೇಕು ಎಂದು ಹಲವು ಬಾರಿ ಒತ್ತಡ ಹೇರಿದ ಫಲವಾಗಿ ನೂರತ್ತು ಕೆರೆ,ಕೆಟ್ಟೆ ಯೋಜನೆಗೆ ಸಚಿವ ಸಂಪುಟ ಅಸ್ತು ಎಂದಿದೆ.ಶಾಸಕರಿಗೂ ಅಭಿನಂದನೆ:
ನೂರತ್ತು ಕೆರೆ, ಕಟ್ಟೆ ಯೋಜನೆಗೆ ಅನುಮತಿ ಕೊಡಿಸುವಲ್ಲಿ ಪ್ರಯತ್ನಿಸಿ ಸಫಲರಾದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರಿಗೆ ಕ್ಷೇತ್ರದ ಜನರು ಅಭಿನಂದನೆ ಸಲ್ಲಿಸಿ, ಅನುದಾನ ಬಿಡುಗಡೆ ಮಾಡಿಸಿ ಯೋಜನೆಗೆ ಶಿಲಾನ್ಯಾಸ ಮಾಡಿಸಲಿ ಎಂದು ರೈತರು ಸಲಹೆ ನೀಡಿದ್ದಾರೆ.ಸರ್ಕಾರಕ್ಕೆ ಕೃತಜ್ಞತೆ:೪೭೫ ಕೋಟಿ ವೆಚ್ಚದಲ್ಲಿ ನೂರತ್ತು ಕೆರೆ, ಕಟ್ಟೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕ್ಷೇತ್ರದ ಜನತೆಯ ಫಲವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.