ಕಾರ್ಖಾನೆ ವಿರೋಧಿ ಹೋರಾಟ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ: ಸಚಿವ ತಂಗಡಗಿ

| Published : Nov 18 2025, 01:00 AM IST

ಕಾರ್ಖಾನೆ ವಿರೋಧಿ ಹೋರಾಟ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸೂಚನೆ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ತಂಗಡಗಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಕೊಪ್ಪಳ: ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ಕುರಿತು ನ. 20ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾಸಮಿತಿ ನಗರಸಭೆಯ ಎದುರು ಬಿಎಸ್‌ಪಿಎಲ್ ಕಾರ್ಖಾನೆ ತೊಲಗಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು.

ನಾನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಅವರೊಂದಿಗೆ ಚರ್ಚೆ ಮಾಡಿಯೇ ಆಗಮಿಸಿದ್ದೇನೆ. ತಮ್ಮ ಬೇಡಿಕೆಗಳಿಗೆ ಈಗಗಾಲೇ ರಾಜ್ಯ ಸರ್ಕಾರ ಸ್ಪಂದನೆ ನೀಡಿದೆ. ಜನಪ್ರತಿನಿಧಿಗಳ ನಿಯೋಗ ತೆರಳಿದಾಗ ಖುದ್ದು ಸಿದ್ದರಾಮಯ್ಯ ಅವರೇ ಮೌಖಿಕ ಆದೇಶ ಮಾಡಿ, ಬಿಎಸ್‌ಪಿಎಲ್ ಕಾರ್ಖಾನೆ ಕಾಮಗಾರಿ ತಡೆಹಿಡಿದಿದ್ದಾರೆ. ಈಗಲೂ ಅವರೊಂದಿಗೆ ಚರ್ಚೆ ಮಾಡಿದಾಗ ಧರಣಿ ನಿರತರ ಸ್ಥಳಕ್ಕೆ ಹೋಗಿ ಬಾ ಎಂದು ಹೇಳಿಕಳುಹಿಸಿದ್ದಾರೆ. ಹೀಗಾಗಿ, ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ಮಾಡದೆ ಇರುವುದು ಹಾಗೂ ಇತರ ಕಾರ್ಖಾನೆಗಳನ್ನು ವಿಸ್ತರಣೆ ಮಾಡದಂತೆ ಮಾಡುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ತಮ್ಮ ಕೋರಿಕೆಯಂತೆ ಈ ಬೇಡಿಕೆಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ಮಾಡುತ್ತೇನೆ. ಹಾಗೆಯೇ ಬಸಾಪುರ ಕೆರೆಯನ್ನು ಕಾರ್ಖಾನೆಗೆ ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಿಯೇ ಗುತ್ತಿಗೆ ನೀಡಲಾಗಿದೆ. ಹೀಗಾಗಿ, ಇದನ್ನು ಹಿಂದೆ ಪಡೆಯುವ ಕುರಿತು ಕ್ಯಾಬಿನೆಟ್‌ನಲ್ಲಿಯೇ ತೀರ್ಮಾನವಾಗಬೇಕು. ಅದನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ ಎಂದರು.

ಜತೆಗೆ ಕಾರ್ಖಾನೆ ಬಾಧಿತ ಗ್ರಾಮಗಳಲ್ಲಿ ಆರೋಗ್ಯ ಸರ್ವೇ ಮಾಡಿಸಲು ಈಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ ಎಂದರು. ಆಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಅವರು, ಇಂಡಿಯನ್ ಮೆಡಿಕಲ್ ಕೌನ್ಸೆಲ್‌ ಮೂಲಕ ಆಗಬೇಕು ಎಂದು ಬೇಡಿಕೆಯಿಟ್ಟರು. ಆಗ ಆಯಿತು, ಸರ್ಕಾರದಿಂದ ನಾನು ಇಂಡಿಯನ್ ಮೆಡಿಕಲ್ ಕೌನ್ಸೆಲ್‌ಗೆ ಪತ್ರ ಬರೆಯುತ್ತೇನೆ ಎಂದರು.

ತಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ಅವುಗಳನ್ನು ಖಂಡಿತವಾಗಿಯೂ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕ್ರಮವಹಿಸುತ್ತದೆ ಎಂದರು.ಹಿಂಸಾರೂಪ ತಾಳುವ ಮುನ್ನವೇ ಎಚ್ಚರವಹಿಸಿ

ಕಾರ್ಖಾನೆ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ಈಗಾಗಲೇ ಹೋರಾಟ ಪ್ರಾರಂಭಿಸಿದ್ದೇವೆ. ಇದು ಹಿಂಸಾರೂಪ ತಾಳುವ ಮುನ್ನವೇ ಸರ್ಕಾರ ಎಚ್ಚೆತ್ತು, ಕ್ರಮವಹಿಸಬೇಕು ಎಂದು ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಅವರು ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಶಿವರಾಜ ತಂಗಡಗಿ ಅವರ ಜತೆ ಮಾತನಾಡಿದ ಅವರು, ದೇವನಹಳ್ಳಿ ರೈತರ ಭೂಮಿ ವಾಪಸ್‌ ನೀಡಿದಂತೆ ಇಲ್ಲಿಯೂ ಕ್ರಮ ವಹಿಸಬೇಕು. ಉತ್ತರ ಕರ್ನಾಟಕದ ರೈತರು ಮತ್ತು ಜನರ ಸಮಸ್ಯೆಗೆ ಸ್ಪಂದಿಸಬೇಕು. ಈಗ ಹೋರಾಟವನ್ನು ಅತ್ಯಂತ ಶಾಂತಿಯುತವಾಗಿ ನಡೆಸಲಾಗುತ್ತಿದ್ದು, ಜನರ ಪರವಾಗಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಅದು ಹಿಂಸಾರೂಪ ತಾಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಸದರ ರಾಜಶೇಖರ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾಧಿಕಾರಿ ಡಾ. ಸುರೇಶ ಇಟನ್ನಾಳ, ಜಿಪಂ ಸಿಇಒ ವರ್ಣೀತ ನೇಗಿ, ಎಸ್ಪಿ ಡಾ. ರಾಮ ಎಲ್. ಅರಸಿದ್ದಿ, ಹೋರಾಟಗಾರ ಡಿ.ಎಚ್. ಪೂಜಾರ, ಕೆ.ಬಿ. ಗೋನಾಳ, ಬಸವರಾಜ ಶೀಲವಂತರ, ಮೂಖಪ್ಪ ಹೊಸಮನಿ, ಮುದಕಪ್ಪ, ಮಂಜುನಾಥ ಗೊಂಡಬಾಳ ಮೊದಲಾದವರು ಇದ್ದರು.ಕಾರ್ಖಾನೆಗಳ ವಿರುದ್ಧ ಹೋರಾಟ ತೀವ್ರಗೊಳಿಸೋಣ: ತೋಂಟದಾರ್ಯ ಶ್ರೀ

ಕೊಪ್ಪಳ: ಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿಯ ಪರಿಸ್ಥಿತಿ ಶೋಚನೀಯ ಎನ್ನುವುದು ಮನವರಿಕೆಯಾಯಿತು. ಹೀಗಾಗಿ, ಕಾರ್ಖಾನೆಗಳ ವಿರುದ್ಧದ ಹೋರಾಟ ತೀವ್ರಗೊಳಿಸೋಣ. ನಾಡಿನ ಶ್ರೀಗಳನ್ನೂ ಕರೆ ತರೋಣ ಎಂದು ಗದಗಿನ ತೋಂಟದಾರ್ಯ ಶ್ರೀ ಸಿದ್ಧರಾಮ ಮಹಾಸ್ವಾಮೀಜಿಗಳು ಹೇಳಿದರು.ಕಾರ್ಖಾನೆ ಬಾಧಿತ ಸ್ಥಳಗಳಿಗೆ ಭೇಟಿ ನೀಡಿ, ಬಳಿಕ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ಘೋಷಣೆ ಮಾಡಿ ಮಾತನಾಡಿದರು. ಎಲ್ಲರೂ ಸೇರಿ ಹೋರಾಟ ತೀವ್ರಗೊಳಿಸೋಣ. ನಾನೂ ನಾಡಿನ ಎಲ್ಲ ಸ್ವಾಮೀಜಿಗಳೊಂದಿಗೆ ಇದಕ್ಕಾಗಿಯೇ ಸಂಪರ್ಕ ಮಾಡುತ್ತೇನೆ. ಅವರನ್ನು ಹೋರಾಟಕ್ಕೆ ಕರೆತರುತ್ತೇನೆ. ಎಲ್ಲರೂ ಒಗ್ಗೂಡಿ ಹೋರಾಟ ಮಾಡಿ, ಇದರಿಂದ ಜನರನ್ನು ಮುಕ್ತಿಗೊಳಿಸೋಣ ಎಂದರು.

ಹೋರಾಟದೊಂದಿಗೆ ಸದಾ ಇರುತ್ತೇನೆ. ನಿಮ್ಮ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿಯ ಪರಿಸ್ಥಿತಿ ನೋಡಿ ನನಗೆ ತೀವ್ರ ನೋವಾಯಿತು. ಈಗ ಮತ್ತೊಂದು ಕಾರ್ಖಾನೆ ಬರುತ್ತಿರುವುದು ಖೇದಕರ ಸಂಗತಿಯಾಗಿದೆ. ಹೀಗಾಗಿ, ಇವುಗಳನ್ನು ತಡೆಯಲು ಹೋರಾಟ ಮಾಡೋಣ ಎಂದರು.

ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳನ್ನು ಸಹ ಭೇಟಿಯಾಗಿ ಹೋರಾಟಕ್ಕೆ ಆಹ್ವಾನ ಮಾಡೋಣ. ಈಗಾಗಲೇ ಅವರೇ ಹೋರಾಟ ಪ್ರಾರಂಭಿಸಿದ್ದಾರೆ. ಈಗ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಅಹ್ವಾನ ಮಾಡಲು ಖುದ್ದು ನಾನೇ ಬರುತ್ತೇನೆ ಎಂದರು.

ನಾನು ಬಾಧಿತ ಗ್ರಾಮಗಳಿಗೆ ಭೇಟಿ ನೀಡಿದಾಗ ಪ್ರತಿಯೊಬ್ಬರ ಮನೆಯಲ್ಲಿ ಕ್ಯಾನ್ಸರ್ ಇದೆ. ವಿಷಮಿಶ್ರಿತ ಗಾಳಿಯನ್ನು ಕುಡಿದು ಅವರು ಆನಾರೋಗ್ಯದಿಂದ ಬಳಲುತ್ತಿದ್ದಾರೆ. ವಿಷ ಅಂತರ್ಜಲ ಸೇರಿದ್ದು, ಒಡಲು ವಿಷವಾಗುತ್ತಿದೆ. ಹೀಗಾಗಿ, ಕಾರ್ಖಾನೆಗಳ ವಿರುದ್ಧ ಹೋರಾಟ ಮಾಡಲೇಬೇಕು ಅನಿಸಿತು. ಹೀಗಾಗಿ, ಹೋರಾಟಕ್ಕೆ ಬೆಂಬಲ ನೀಡಿದ್ದೇನೆ ಎಂದರು.

ಬಸವರಾಜ ಬಳ್ಳೊಳ್ಳಿ, ಡಿ.ಎಂ. ಬಡಿಗೇರ, ಜ್ಯೋತಿ ಗೊಂಡಬಾಳ ಸೇರಿದಂತೆ ಅನೇಕರು ಇದ್ದರು.