ಸಾರಾಂಶ
ಬೆಂಗಳೂರು : ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಹೊಸೂರು ರಸ್ತೆಯ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ 12,690 ಕೋಟಿ ರು. ವೆಚ್ಚದಲ್ಲಿ 18 ಕಿ.ಮೀ. ಉದ್ದದ ಸುರಂಗ ಮಾರ್ಗದ ರಸ್ತೆ ನಿರ್ಮಾಣ (ಟ್ವಿನ್ ಟ್ಯೂಬ್ ಮಾದರಿ) ಮಾಡಲು ಸಚಿವ ಸಂಪುಟ ಸಭೆ ತಾತ್ವಿಕ ಅನುಮೋದನೆ ನೀಡಿದೆ.
ಬೆಂಗಳೂರು ನಗರದಲ್ಲಿನ ಸಂಚಾರದಟ್ಟಣೆ ನಿಯಂತ್ರಿಸಲು 11 ಕಾರಿಡಾರ್‌ಗಳಲ್ಲಿ 190 ಕಿ.ಮೀ. ಉದ್ದದ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಮಾಡಲು ಬಿಬಿಎಂಪಿಯು ಪ್ರಸ್ತಾವನೆ ಸಿದ್ಧಪಡಿಸಿತ್ತು. ಜತೆಗೆ ಬೆಂಗಳೂರು ಹೃದಯ ಭಾಗದಲ್ಲಿ ಒಟ್ಟು 99.50 ಕಿ.ಮೀ. ಉದ್ದದ 17 ಮೇಲ್ಸೇತುವೆಗಳ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿತ್ತು.
ಈ ಪೈಕಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್ಟೀಮ್ ಮಾಲ್‌ನಿಂದ ಹೊಸೂರು ರಸ್ತೆಯ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಟನಲ್ ರಸ್ತೆ ನಿರ್ಮಾಣ ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
250 ಅಡಿ ಎತ್ತರದ ಸ್ಕೈ ಡೆಕ್ ನಿರ್ಮಾಣ:
ಬೆಂಗಳೂರು ನಗರದ ಹೆಮ್ಮಿಗೆಪುರದ ನೈಸ್ ರಸ್ತೆ ಬಳಿ 500 ಕೋಟಿ ರು. ವೆಚ್ಚದಲ್ಲಿ 250 ಮೀಟರ್ ಎತ್ತರದ ಆಕಾಶ ಗೋಪುರ (ಸ್ಕೈಡೆಕ್) ನಿರ್ಮಿಸಲು ಸಚಿವ ಸಂಪುಟ ತಾಂತ್ರಿಕ ಅನುಮೋದನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಉತ್ತೇಜನ ನೀಡಲು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಸ್ಕೈಡೆಕ್ ನಿರ್ಮಿಸಲು ಒಪ್ಪಿಗೆ ನೀಡಲಾಯಿತು.
52 ಇಂದಿರಾ ಕ್ಯಾಂಟೀನ್ ನಿರ್ಮಾಣ:
ಪ್ರಸ್ತುತ 198 ವಾರ್ಡ್‌ಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 243 ವಾರ್ಡ್‌ಗಳಿದ್ದು ಹೆಚ್ಚುವರಿಗೆ ವಾರ್ಡ್‌ಗಳಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು 52 ಹೊಸ ಕ್ಯಾಂಟೀನ್ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಇಂದಿರಾ ಕ್ಯಾಂಟೀನ್‌ಗೆ ತಲಾ 40 ಲಕ್ಷ ರು.ಗಳಂತೆ 20 ಕೋಟಿ ರು.ಗಳ ವೆಚ್ಚಕ್ಕೆ ಅನುಮೋದನೆ ನೀಡಿರುವುದಾಗಿ ತಿಳಿದುಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಟಿಡಿಆರ್ ಯೋಜನೆಯಡಿ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಸೂಚನೆ ಅನ್ವಯ ಸಾರ್ವಜನಿಕರಿಗೆ ಭೂಪರಿಹಾರ ನೀಡಲು ಸರ್ಕಾರದಿಂದ ಹೊಸದಾಗಿ ಮಾರ್ಗಸೂಚಿ ಹೊರಡಿಸಲು ಸಚಿವ ಸಂಪುಟ ನಿರ್ಧರಿಸಿದೆ. ಭೂಮಿಯನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಭೂಮಾಲೀಕರಿಗೆ ಏಕರೂಪದ ಪರಿಹಾರ ನೀಡುವುದು ಸಂಕೀರ್ಣ ಸಮಸ್ಯೆಯಾಗಿದೆ. ಹೀಗಾಗಿ ಯಾವ್ಯಾವ ಜಮೀನು ಸ್ವಾಧೀನಪಡಿಸಿಕೊಂಡಾಗ ಯಾವ ರೀತಿಯಲ್ಲಿ ಟಿಡಿಆರ್ ಪರಿಹಾರ ನೀಡಬೇಕು ಹಾಗೂ ಟಿಡಿಆರ್ ಪರಿಹಾರ ನೀಡುವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪ್ರಕ್ರಿಯೆ ಹೇಗಿರಬೇಕು. ಸಂಗ್ರಹಿಸಿದ ಶುಲ್ಕವನ್ನು ಕಂದಾಯ ಇಲಾಖೆಗೆ ಎಷ್ಟು ದಿನಗಳ ಒಳಗಾಗಿ ಪಾವತಿಸಬೇಕು ಎಂಬಿತ್ಯಾದಿ ನಿಯಮಗಳನ್ನು ಮಾರ್ಗಸೂಚಿ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
684 ಕೋಟಿ ರು.ವೆಚ್ಚದಲ್ಲಿ ಬೀದಿ ದೀಪ ನಿರ್ವಹಣೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಧನ ವೆಚ್ಚ ಉಳಿತಾಯ ಮಾಡುವ ಸಲುವಾಗಿ ಸಾಂಪ್ರದಾಯಿಕ ವಿದ್ಯುತ್ ಬೀದಿ ದೀಪಗಳನ್ನು ತೆರವುಗೊಳಿಸಿ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸಿ ನಿರ್ವಹಣೆ ಮಾಡಲು ಇಎಂಐ ವಾರ್ಷಿಕ ಪಾವತಿ ಯೋಜನೆಯಡಿ ಮುಂದಿನ 7 ವರ್ಷಗಳ ಅವಧಿಗೆ 684 ಕೋಟಿ ರು. ವೆಚ್ಚದಲ್ಲಿ ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆ ಮಾಡಲು ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣೆ ವ್ಯವಸ್ಥೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.