ಸಾರಾಂಶ
- ನಿಷ್ಕ್ರಿಯ, ಕಳಂಕಿತರ ಕೈಬಿಟ್ಟು ಹೊಸಬರಿಗೆ ಮಣೆ- ವಿವಾದಾತ್ಮಕ ಹೇಳಿಕೆ ವೀರರ ಕೈಬಿಡಲು ಚಿಂತನೆ- ಉಪಸಮರದ ಬಳಿಕ ಭಾರಿ ಬದಲಾವಣೆ ಸಂಭವ
ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ: ಸಿಎಂ ಸಿದ್ದು ಸ್ಪಷ್ಟ ಸುಳಿವುಮೈಸೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡು ಜೈಲು ಪಾಲಾಗಿದ್ದ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಎಚ್.ಡಿ.ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರು, ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಅವರ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಸುಮ್ಮನೆ ಸುಳ್ಳು ಹೇಳಲ್ಲ. ಆದರೆ, ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಡಬೇಕು, ಕೊಡ್ತೀನಿ ಎಂದರು.
--ಕನ್ನಡಪ್ರಭ ವಾರ್ತೆ ಬೆಂಗಳೂರು
ಉಪ ಚುನಾವಣೆ ಗೌಜು ಗದ್ದಲ ಮುಗಿಯುತ್ತಿದ್ದಂತೆಯೇ ಆಡಳಿತಕ್ಕೆ ಚುರುಕು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ ಮಾಸದಲ್ಲಿ ಸಂಪುಟ ಪುನಾರಚನೆಗೆ ಕೈ ಹಾಕುವ ಹಾಗೂ ಆಡಳಿತ ಯಂತ್ರದಲ್ಲಿ ಭಾರಿ ಬದಲಾವಣೆ ತರುವ ಸಾಧ್ಯತೆಗಳಿವೆ.ಮೂಲಗಳ ಪ್ರಕಾರ, ಪ್ರಸ್ತುತ ಸಚಿವ ಸಂಪುಟದಲ್ಲಿ ನಿಷ್ಕ್ರಿಯರಾಗಿರುವ ಹಾಗೂ ಭ್ರಷ್ಟಾಚಾರದ ತೀವ್ರ ಆರೋಪಕ್ಕೆ ಗುರಿಯಾಗಿರುವ ಆರೇಳು ಸಚಿವರನ್ನು ಬದಲಾಯಿಸಿ, ಆ ಸ್ಥಾನಕ್ಕೆ ಅರ್ಹರನ್ನು ತರುವ ಚಿಂತನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ.
ಇವರು ಔಟ್?:ಹಾಲಿ ಸಂಪುಟದಲ್ಲಿ ತೀವ್ರ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ನಿಷ್ಕ್ರಿಯರಾಗಿದ್ದಾರೆ ಎನ್ನಲಾದ ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಎನ್. ರಾಜಣ್ಣ, ಬೋಸರಾಜು ಮೊದಲಾದ ಆರೇಳು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಪಟ್ಟಿಯಲ್ಲಿ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸದ, ಭ್ರಷ್ಟಾಚಾರದ ಆರೋಪಗಳಿರುವ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಕುಂದುವಂತೆ ಮಾಡಿದ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ಸೇರಿಸಲು ಮುಹೂರ್ತ ನಿಗದಿ ಮಾಡಲಾಗಿದೆ.ಸಂಪುಟ ಪುನಾರಚನೆಗೂ ಮುನ್ನ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಬಿ. ನಾಗೇಂದ್ರ ದೋಷಮುಕ್ತರಾದರೆ ವಾಪಸು ಸಚಿವ ಸಂಪುಟ ಸೇರುವ ಲಕ್ಷಣಗಳಿವೆ. ಅಲ್ಲದೆ ಹೊಸಬರಿಗೆ ಮಣೆ ಹಾಕಲು ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಭಾರಿ ಆಡಳಿತಾತ್ಮಕ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಮುಖ್ಯಮಂತ್ರಿ ಕಚೇರಿಯ ಅಧಿಕಾರಿ ವರ್ಗವನ್ನು ಬದಲಾಯಿಸುವ ಚಿಂತನೆ ಮುಖ್ಯಮಂತ್ರಿಯವರಿಗೆ ಇದೆ ಎಂದು ಮೂಲಗಳು ಹೇಳಿವೆ.