ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌ ನಡುವೆ ಇರುವ 1200 ಕೇಬಲ್‌ಗಳಲ್ಲಿ ಈಗಾಗಲೇ ಹೊಸದಾಗಿ 1000 ಕೇಬಲ್‌ ಬದಲಾವಣೆ ಕಾರ್ಯ ಪೂರ್ಣಗೊಂಡಿದ್ದು ಇನ್ನು 200 ಕೇಬಲ್‌ ಬದಲಾವಣೆ ಮಾತ್ರ ಬಾಕಿ ಉಳಿದಿದೆ

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌ ನಡುವೆ ಇರುವ 1200 ಕೇಬಲ್‌ಗಳಲ್ಲಿ ಈಗಾಗಲೇ ಹೊಸದಾಗಿ 1000 ಕೇಬಲ್‌ ಬದಲಾವಣೆ ಕಾರ್ಯ ಪೂರ್ಣಗೊಂಡಿದ್ದು ಇನ್ನು 200 ಕೇಬಲ್‌ ಬದಲಾವಣೆ ಮಾತ್ರ ಬಾಕಿ ಉಳಿದಿದೆ.

ಬಾಕಿ ಉಳಿದಿರುವ 200 ಕೇಬಲ್‌ ಬದಲಾಯಿಸಲು ಎರಡೂವರೆ ತಿಂಗಳು ಕಾಲಾವಕಾಶ ಬೇಕಾಗಲಿದ್ದು ಅಕ್ಟೋಬರ್‌ ಮೊದಲ ವಾರದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ವಾರದ ಎಲ್ಲ ದಿನವೂ ಮೇಲ್ಸೇತುವೆ ಮುಕ್ತವಾಗಲಿದೆ. ಮೇಲ್ಸೇತುವೆಯನ್ನು ಸದೃಢಗೊಳಿಸಲು ಇದೇ ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ವು ‘ಆ್ಯಂಟಿ ಕಾರ್ಬನೇಷನ್‌ ಪೈಂಟ್‌’ ಬಳಸುತ್ತಿರುವುದು ವಿಶೇಷವಾಗಿದೆ.

ಮೊದಲ ಹಂತದಲ್ಲಿ 120 ಪಿಲ್ಲರ್‌ ನಡುವೆ ಖಾಲಿ ಇದ್ದ ಸ್ಥಳದಲ್ಲಿ ತಲಾ ಎರಡರಂತೆ ಒಟ್ಟಾರೆ 240 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಿ ಮೇಲ್ಸೇತುವೆಯನ್ನು ಭದ್ರಪಡಿಸಲಾಗಿತ್ತು. ಬಳಿಕ 120 ಪಿಲ್ಲರ್‌ಗಳ ನಡುವೆ ಇದ್ದ ತಲಾ 10 ರಂತೆ 1200 ಕೇಬಲ್‌ಗಳನ್ನೂ ಬದಲಾಯಿಸುವ ಕಾರ್ಯ ಪ್ರಾರಂಭಿಸಿದ್ದು ಇಲ್ಲಿಯವರೆಗೂ ಸಾವಿರ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಇನ್ನುಳಿದ 200 ಕೇಬಲ್‌ ಅಳವಡಿಕೆಗೆ ಎರಡೂವರೆ ತಿಂಗಳು ಕಾಲಾವಕಾಶ ಬೇಕಾಗಬಹುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮೂರೂವರೆ ವರ್ಷದ ಹಿಂದೆ ಬಾಗಿದ್ದ ಕೇಬಲ್‌

ರಾಜ್ಯದ 20 ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುವ, ಗೋವಾ, ಮಹಾರಾಷ್ಟ್ರ, ತೆಲಂಗಾಣಕ್ಕೂ ಸಂಪರ್ಕ ಕಲ್ಪಿಸುವ 4.2 ಕಿ.ಮೀ. ಉದ್ದವಿರುವ ಪೀಣ್ಯ ಮೇಲ್ಸೇತುವೆಯ 8 ನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103 ನೇ ಪಿಲ್ಲರ್‌ ನಡುವಿನ 3 ಕೇಬಲ್‌ ಬಾಗಿದ್ದರಿಂದ 25 ಡಿಸೆಂಬರ್‌ 2021 ರಲ್ಲಿ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಆಗ ಎನ್‌ಎಚ್‌ಎಐ ನಿಷೇಧಿಸಿತ್ತು. ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಪರಿಣಿತರು, ಮೇಲ್ಸೇತುವೆಯನ್ನು ಹಲವು ಪರೀಕ್ಷೆಗೆ ಒಳಪಡಿಸಿ ‘ಭಾರೀ ವಾಹನಗಳು ಸಂಚರಿಸಿದ್ದರಿಂದ ಕೇಬಲ್‌ಗಳು ಬಾಗಿವೆ’ ಎಂದು ವಿಸ್ತೃತ ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ನಂತರ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಸಂಪೂರ್ಣ ಬಂದ್‌ ಮಾಡಿ ‘ಲೋಡ್‌ ಟೆಸ್ಟ್‌’ ಸೇರಿದಂತೆ ಹಲವು ಪರೀಕ್ಷೆ ನಡೆಸಲಾಗಿತ್ತು. ಮೊದಲಿಗೆ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮೊದಲ ಹಂತದಲ್ಲಿ 120 ಪಿಲ್ಲರ್‌ ನಡುವೆ ತಲಾ ಎರಡರಂತೆ 240 ಹೊಸ ಕೇಬಲ್‌ ಅಳವಡಿಸಿ ಮೇಲ್ಸೇತುವೆ ಸದೃಢಗೊಳಿಸಲಾಗಿತ್ತು.

ಬಳಿಕ 120 ಪಿಲ್ಲರ್‌ ನಡುವಿನ ತಲಾ 10 ರಂತಿರುವ 1200 ಕೇಬಲ್‌ಗಳನ್ನೂ ಬದಲಾಯಿಸಲು ಎನ್‌ಎಚ್‌ಎಐ ಮುಂದಾಗಿತ್ತು. ಇದೀಗ 1000 ಕೇಬಲ್‌ ಬದಲಾಯಿಸಲಾಗಿದೆ. ಹೊಸ ಕೇಬಲ್‌ಗಳನ್ನು ಅಳವಡಿಸಿದ ಬಳಿಕ ಕಾಂಕ್ರೀಟ್‌ (ಸಿಮೆಂಟ್‌ ಗ್ರೌಟಿಂಗ್‌) ಹಾಕಬೇಕಿರುವುದರಿಂದ ಪ್ರತಿ ಬುಧವಾರ ಬೆಳಿಗ್ಗೆ 6 ರಿಂದ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೂ ಮೇಲ್ಸೇತುವೆಯ ಮೇಲೆ ಭಾರೀ ವಾಹನಗಳ ಸಂಚಾರವನ್ನು ಮಾತ್ರ ಪ್ರಸ್ತುತ ನಿಷೇಧಿಸಲಾಗಿದೆ.ಏನಿದು ‘ಆ್ಯಂಟಿ ಕಾರ್ಬನೇಷನ್‌ ಪೈಂಟ್‌’?

ಬೆಂಗಳೂರು-ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಪಾರ್ಲೇಜಿ ಫ್ಯಾಕ್ಟರಿವರೆಗಿನ ಪೀಣ್ಯ ಮೇಲ್ಸೇತುವೆಯು 4.2 ಕಿ.ಮೀ. ಉದ್ದ ಹೊಂದಿದ್ದು ಸಂಪೂರ್ಣ ಮೇಲ್ಸೇತುವೆಗೆ ‘ಆ್ಯಂಟಿ ಕಾರ್ಬನೇಷನ್‌ ಪೈಂಟ್‌’ ಹೊಡೆಸಲು ಎನ್‌ಎಚ್‌ಎಐ ನಿರ್ಧರಿಸಿದೆ. ಹವಾಮಾನ ವೈಪರೀತ್ಯ ಅಥವಾ ರಾಸಾಯನಿಕ ಪ್ರಕ್ರಿಯೆಯಿಂದ ಲೋಹವು ತುಕ್ಕು ಹಿಡಿಯುವುದು, ಧೂಳು ಕೂರುವುದು, ಕಾಂಕ್ರೀಟ್‌ ಬಿರುಕು ಬಿಡುವುದನ್ನು ತಪ್ಪಿಸಲು ಆ್ಯಂಟಿ ಕಾರ್ಬನೇಷನ್‌ ಬಣ್ಣ ಬಳಿಯಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಮೇಲ್ಸೇತುವೆಯ ನಿರ್ವಹಣೆ, ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.ಮೇಲ್ಸೇತುವೆಯನ್ನು ಸದೃಢಗೊಳಿಸಲು ಈಗಾಗಲೇ ಎರಡು ಪಿಲ್ಲರ್‌ ನಡುವೆ ಹೆಚ್ಚುವರಿಯಾಗಿ ತಲಾ ಎರಡರಂತೆ 240 ಕೇಬಲ್‌ ಅಳವಡಿಸಲಾಗಿದೆ. ಇದಲ್ಲದೆ, ಎರಡು ಪಿಲ್ಲರ್‌ ನಡುವೆ ತಲಾ 10 ಕೇಬಲ್‌ನಂತೆ 1200 ಕೇಬಲ್‌ ಇದ್ದು ಇವುಗಳಲ್ಲಿ 200 ಕೇಬಲ್‌ ಅಳವಡಿಕೆ ಬಾಕಿ ಇದೆ. ಮೇಲ್ಸೇತುವೆ ಉತ್ತಮ ಸ್ಥಿತಿಯಲ್ಲಿದ್ದು ಸುಭದ್ರವಾಗಿದೆ.

- ಕೆ.ವಿ. ಜಯಕುಮಾರ್‌, ಎನ್‌ಎಚ್‌ಎಐ ಸ್ಥಳೀಯ ಯೋಜನಾ ನಿರ್ದೇಶಕ