ಉಡುಪಿ: ದೇಶಕ್ಕಾಗಿ ನಡೆಸುವ ಸೈದ್ಧಾಂತಿಕ ಚಳುವಳಿಗೂ, ದೇಶದಲ್ಲಿ ಅರಾಜಕತೆ ಹುಟ್ಟುಹಾಕುವ ಪ್ರತಿಭಟನೆಗಳಿಗೂ ಬಹಳ ವ್ಯತ್ಯಾಸವಿದೆ. ಪ್ರತಿಭಟನೆ ನೆಪದಲ್ಲಿ ಕಾಕ್ರೋಚ್ ದೇಶವಿರೋಧಿ ಚಟುವಟಿಕೆ ನಡೆಸಲಾಗುತ್ತಿದೆ, ಇಂತಹ ನಡೆಗಳನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.ಮಂಗಳವಾರ, ನಗರದ ಜಟ್ಕಾ ಸ್ಟ್ಯಾಂಡ್‌ನಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗೂಂಡಾ ವರ್ತನೆ ಹಾಗೂ ದೇಶವಿರೋಧಿ ಶಕ್ತಿಗಳು ಅರಾಜಕತೆ ಸೃಷ್ಟಿಸಲು ನಡೆಸುತ್ತಿರುವ ಕುತಂತ್ರಗಳನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

​ನಾವು ಕೂಡ ಹಲವು ಚಳವಳಿಗಳ ಮೂಲಕ ಬೆಳೆದು ಬಂದವರು. ಚಳುವಳಿಗಳ ಮೂಲಕವೇ ಸರ್ಕಾರ ಅಧಿಕಾರಕ್ಕೆ ತಂದಿದ್ದೇವೆ. ಆದರೆ, ಮೊನ್ನೆ ನಡೆದ ಪ್ರತಿಭಟನೆ ರಾಜಕೀಯ ಲಾಭಕ್ಕಾಗಿ ಅರಾಜಕತೆ ಸೃಷ್ಟಿಸುವ ಸ್ಪಷ್ಟ ಯತ್ನವಾಗಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ದಲಿತ ವಿರೋಧಿ, ಅಸಹಿಷ್ಣುತೆ ಎನ್ನುವ ನಕಲಿ ನಿರೂಪಣೆಗಳನ್ನು ಹೆಣೆದರು. ಸಿಎಎ ಕಾಯ್ದೆ ತಂದಾಗ ಮುಸ್ಲಿಮರನ್ನು ಎತ್ತಿಕಟ್ಟಿದರು. ದೇಶದ ಭದ್ರತೆಗಾಗಿ ಮಿಲಿಟರಿ ಆಪರೇಷನ್ ನಡೆಸಿದಾಗ ಸಾಕ್ಷ್ಯ ಕೇಳಿದವರು ಈಗ ‘ಕಾಕ್ರೋಚ್’ ಹೆಸರಿನಲ್ಲಿ ಮತ್ತೆ ಬೀದಿಗಿಳಿಸಿದ್ದಾರೆ ಎಂದು ಕಿಡಿಕಾರಿದರು.ದೇಶದ ನಾಗರಿಕರು ಸೈನಿಕರು ಹಾಗೂ ಪೊಲೀಸರನ್ನು ಗೌರವಿಸುತ್ತಾರೆ. ಆದರೆ ಅವರ ಮೇಲೆಯೇ ಹಲ್ಲೆ ನಡೆಸಿ ಅರಾಜಕತೆ ಸೃಷ್ಟಿಸುವುದನ್ನು ಸಹಿಸಲು ಸಾಧ್ಯವಿಲ್ಲ, ಅಂತಹ ಪ್ರಯತ್ನಗಳ‍ನ್ನು ಮೆಟ್ಟಿ ಹಾಕಲಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಮಾದಕವ್ಯಸನಿಗಳು: ​ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕಾಂಗ್ರೆಸ್ ಬೆಂಬಲಿತ ದೇಶವಿರೋಧಿಗಳು ವಿದೇಶಿ ಫಂಡ್ ಪಡೆದು ದೇಶದ ಶಾಂತಿ ಕೆಡಿಸುತ್ತಿದ್ದಾರೆ. ಮಣಿಪಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾದಕವ್ಯಸನಿಗಳು ಹಾಗೂ ಕ್ರಿಮಿನಲ್ ಹಿನ್ನೆಲೆ ಇರುವವರು ಭಾಗಿ ಆಗಿದ್ದರು. ಮಣಿಪಾಲದಲ್ಲಿ ಡ್ರಗ್ಸ್ ಸಪ್ಲೈ ಮಾಡುವವರ ಮಾಹಿತಿ ನಮ್ಮ ಬಳಿ ಇದೆ. ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುತ್ತೇವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾವೇ ರಂಗಕ್ಕಿಳಿದು ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ. ಪಕ್ಷದ ಪ್ರಮುಖರಾದ ಮಟ್ಟಾರ್ ರತ್ನಾಕರ ಹೆಗ್ಡೆ, ದಿನಕರ ಶೆಟ್ಟಿ ಹೆರ್ಗ, ಉದಯಕುಮಾರ್ ಶೆಟ್ಟಿ, ರೇಷ್ಮಾ ಉದಯ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುಯಿಲಾಡಿ ಸುರೇಶ್‌ ನಾಯಕ್, ಶ್ರೀಕಾಂತ್ ನಾಯಕ್, ಜಿತೇಂದ್ರ ಶೆಟ್ಟಿ, ರಾಜೀವ್ ಕುಲಾಲ್, ದಿನೇಶ್ ಅಮೀನ್, ಅನಿತಾ ಮರವಂತೆ, ಸಂಧ್ಯಾ ರಮೇಶ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.