ಕನ್ನಡ ಪ್ರಭ ವಾರ್ತೆ ಬೇಲೂರು

ಡಾ.ಬಿ.ಆರ್.ಅಂಬೇಡ್ಕರ್‌ರವರ 135ನೇ ಜಯಂತಿ ಅಂಗವಾಗಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಯಕ ಚಂದನ್ ಕುಮಾರ್‌ರನ್ನು ಸನ್ಮಾನಿಸಲಾಯಿತು.ಡಾ. ಅಂಬೇಡ್ಕರ್‌ರವರ ಜಯಂತಿ ಅಂಗವಾಗಿ ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿ ಗ್ರಾಮಸ್ಥರು ಜಯಂತಿಯಂದು ಬುದ್ಧ ಮತ್ತು ಡಾ. ಅಂಬೇಡ್ಕರ್ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಗೌರವ ಸಲ್ಲಿಸಿದರು.ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗಿಯ ಸಂ.ಸಂಚಾಲಕ ಬಿ. ಎಲ್. ಲಕ್ಷ್ಮಣ್ ಮಾತನಾಡಿ, ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಮತ್ತು ಸ್ವಾತಂತ್ರ್ಯ ಕೊಡಿಸುವಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರವರ ಪಾತ್ರ ಮಹತ್ತರದ್ದಾಗಿದೆ. ಅವರು ಹಾಕಿ ಕೊಟ್ಟ ದಾರಿಯಲ್ಲಿ ನಾವುಗಳು ನಡೆಯಬೇಕಿದೆ. ಅಂಬೇಡ್ಕರ್‌ರವರ ಜಯಂತಿಯನ್ನು ವಿಶ್ವದಾಧ್ಯಂತ ಜ್ಞಾನದ ದಿನವನ್ನಾಗಿ ಆಚರಿಸಿ ಗೌರವಿಸುವುದಲ್ಲದೆ, ಅಮೇರಿಕ ಸೇರಿದಂತೆ ಇತರೆ ರಾಷ್ಟçಗಳಲ್ಲಿ ನಗರ ಪ್ರದೇಶದ ಬೀದಿಗಳಿಗೆ ಡಾ. ಅಂಬೇಡ್ಕರ್ ಹೆಸರಿಟ್ಟು, ದೊಡ್ಡ ಗ್ರಂಥಾಲಯಗಳನ್ನು ಸ್ಥಾಪಿಸಿ ಗೌರವಿಸುತಿದ್ದರೆ, ಇತ್ತ ಭಾರತ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡುವ ಮೂಲಕ ಸಮಾನತೆ ಸಾರಿದ ಮಹಾನ್ ನಾಯಕನನ್ನು ಜಾತಿಯಿಂದ ನೋಡಿ ಕಾಟಾಚಾರಕ್ಕೆಂಬಂತೆ ಗೌರವಿಸುವುದು ಕಾಣುತಿದ್ದೇವೆ. ಅಲ್ಲದೆ ಅವರು ಮುಂದಿನ ಪೀಳಿಗೆಯವರೂ ಸಮಾಜದಲ್ಲಿ ಹೇಗೆ ಬದುಕಬೇಕು, ಮತ್ತು ಹಾಗೂ ಹೋಗುಗಳನ್ನು ತಿಳಿದು ಸರ್ವರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಅಂತವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಬಾಬು ಪ್ರಸಾದ್ ಮಾತನಾಡಿ , ಈ ಜಗತ್ತಿನಲ್ಲಿ ಭೂಮಿ ಸೂರ್ಯ ಎಲ್ಲಿವರೆಗೂ ಇರುತ್ತಾರೋ ಅಲ್ಲಿವರೆಗೂ ಅವರ ಹೆಸರು ಅಜರಾಮರವಾಗಿರುತ್ತದೆ. ಅವರು ಹೆಳಿದಂತೆ ಮೊದಲು ನಾವುಗಳು ನಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು. ವಿದ್ಯೆ ಕಲಿತರೆ ಮಾತ್ರ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿಎಲ್ಲರೂ ಮುಂದಾಗಬೇಕು ಎಂದರು. ಇದೇ ಸಂದರ್ಭ ಸ್ಥಳೀಯ ಗಾಯಕ ಚಂದನ್ ಕುಮಾರ್‌ರನ್ನು ಅಂಬೇಡ್ಕರ್ ನಗರದ ನಿವಾಸಿಗರು ಸನ್ಮಾನಿಸಿದರು. ಪುರಸಭೆ ನಾಮಿನಿ ಸದಸ್ಯ ಚನ್ನಕೇಶವಯ್ಯ, ಗ್ರಾಮಸ್ಥರಾದ ರಾಮಣ್ಣ, ಜಗದೀಶ್, ಸ್ಥಳೀಯ ಗ್ರಂಥಪಾಲಕಿ ಗಾಯತ್ರಿ, ಪುನೀತ್, ಪಾಪಣ್ಣಿ, ರಾಜು, ತುಂಗಮ್ಮ, ಪ್ರಸಾದ್ ಇತರರಿದ್ದರು.