ರಾಮನಗರ: ಹೊಸ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಲೋಚನೆ. ಹೀಗಾಗಿ ಶೇಕಡ 60ರಷ್ಟು ಹೊಸಬರು ಮತ್ತು ಶೇಕಡ 40ರಷ್ಟು ಹಳೆ ಶಾಸಕರಿಗೆ ಸಚಿವ ಸ್ಥಾನ ಕೊಡುವ ಲೆಕ್ಕಾಚಾರವಿದ್ದು, ಅದರಂತೆ ಸಂಪುಟ ವಿಸ್ತರಣೆ ಆಗಬಹುದು. ಅದರಲ್ಲಿ ನನಗೂ ಮಂತ್ರಿಗಿರಿ ಸಿಗುವ ವಿಶ್ವಾಸವಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು

ರಾಮನಗರ: ಹೊಸ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಲೋಚನೆ. ಹೀಗಾಗಿ ಶೇಕಡ 60ರಷ್ಟು ಹೊಸಬರು ಮತ್ತು ಶೇಕಡ 40ರಷ್ಟು ಹಳೆ ಶಾಸಕರಿಗೆ ಸಚಿವ ಸ್ಥಾನ ಕೊಡುವ ಲೆಕ್ಕಾಚಾರವಿದ್ದು, ಅದರಂತೆ ಸಂಪುಟ ವಿಸ್ತರಣೆ ಆಗಬಹುದು. ಅದರಲ್ಲಿ ನನಗೂ ಮಂತ್ರಿಗಿರಿ ಸಿಗುವ ವಿಶ್ವಾಸವಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ಹೋಗಿದ್ದು, ಹೈಕಮಾಂಡ್ ನೊಂದಿಗೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡುತ್ತಾರೆ.

ಸಾಕಷ್ಟು ಶಾಸಕರೂ ಸಹ ಅಭಿಪ್ರಾಯ ಹೇಳಲು ದೆಹಲಿಗೆ ಹೋಗಿದ್ದಾರೆ. ಆದರೆ, ಅವರನ್ನು ಒಳಗಡೆ ಬಿಡುವುದಿಲ್ಲ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತು ಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ಯಾರಿಗೂ ಮಾತು ಕೊಟ್ಟಿಲ್ಲ. ಇದರಲ್ಲಿ ರಾಹುಲ್ ಗಾಂಧಿ ತೀರ್ಮಾನವೇ ಅಂತಿಮ.

ಈಗಾಗಲೇ ಹೈಕಮಾಂಡ್ ಗೆ ಇಲ್ಲಿ‌ನ ರಿಪೋರ್ಟ್ ಸಿಕ್ಕಿದೆ. ಅದರಂತೆ ಅವರು ನಿರ್ಧಾರ ಮಾಡುತ್ತಾರೆ ಎಂದು ಉತ್ತರಿಸಿದರು.

ನಾನು ಮುಖ್ಯಮಂತ್ರಿಗಳ ಜೊತೆ ಇರುವುದು, ಅವರು ನಮ್ಮ ಜಿಲ್ಲೆಯವರು ಅಂತ. ನಾನು ಆಪ್ತ, ನಿಮ್ಮ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದೆ. ಹಾಗಾಗಿ ಸಚಿವ ಸ್ಥಾನ ಕೊಡಿ ಅಂತ ಕೇಳಿಲ್ಲ. ಅರ್ಹತೆ ಮೇಲೆ ತೀರ್ಮಾನ ಮಾಡಿ ಅಂತ ಕೇಳಿದ್ದೇವೆ ಅಷ್ಟೇ ಎಂದು ಬಾಲಕೃಷ್ಣ ಹೇಳಿದರು.

ಸಂಪುಟ ರಚನೆ ಬಳಿಕೆ ಸಮಿತಿ ರಚನೆ:

ಬಿಡದಿ ಡೌನ್ ಶಿಪ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಈಗಾಗಲೇ ಅದು ಎಲ್ಲಾ ಮುಗಿದು ಹೋಗಿದೆ. ಹಣ ಪಡೆಯುವವರು ಪಡೆಯುತ್ತಿದ್ದಾರೆ, ಜಮೀನು ಕೊಡುವವರು ಕೊಡುತ್ತಿದ್ದಾರೆ. ಬೇಡ ಎನ್ನುವವರು ಕಾನೂನು ಹೋರಾಟ ಮಾಡಬಹುದು ಎಂದು ತಿಳಿಸಿದರು.

ಇನ್ನೆರಡು ಕಂದಾಯ ಗ್ರಾಮಗಳ ಅಂತಿಮ ನೋಟಿಫಿಕೇಷನ್ ಆಗಬೇಕು. ಈ ಬಗ್ಗೆ ಚರ್ಚೆ ಆಗುತ್ತಿದೆ. ಟೌನ್ ಶಿಪ್ ವಿರೋಧ ಇರುವವರನ್ನೂ ವಿಶ್ವಾಸಕ್ಕೆ ಪಡೆಯಬೇಕು ಎಂಬುದು ಮುಖ್ಯಮಂತ್ರಿಗಳ ಸೂಚನೆ. ಹಾಗಾಗಿ ಎಲ್ಲರನ್ನೂ ವಿಶ್ವಾಸ ಪಡೆಯುವ ಕೆಲಸ ಮಾಡುತ್ತಿದ್ದೇವೆ. ಸಚಿವ ಸಂಪುಟ ರಚನೆ ಗೊಂದಲದ ಬಳಿಕ ಈ ಬಗ್ಗೆ ಸಮಿತಿ ರಚನೆ ಆಗಲಿದೆ. ಪ್ರತಿಭಟನೆ ಮಾಡುತ್ತಿರುವ ರೈತರ ಸಮಸ್ಯೆ ಆಲಿಸಿ, ಅವರಿಗೆ ಬೇರೆ ಅನುಕೂಲ ಮಾಡಿಕೊಡುವ ಬಗ್ಗೆ ಸಮಿತಿ ಚರ್ಚೆ ಮಾಡಲಿದೆ ಎಂದರು.

ಸರ್ಕಾರಿ ಅಧಿಕಾರಿಗಳ ಮೇಲಿನ ಹಲ್ಲೆ ಸಂಬಂಧ ರೈತರು ಮೇಲೆ ಪ್ರಕರಣ ದಾಖಲಾಗಿದೆ. ಆ ಪ್ರಕರಣಗಳನ್ನು ವಾಪಸ್ ಪಡೆಯಬೇಕಾ ಅಂತ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಬಾಲಕೃಷ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೂ ರೈತರ ವಿರೋಧ ವ್ಯಕ್ತಪಡಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಇದೆಲ್ಲಾ ಊಹಾಪೋಹಗಳು. ವಿಮಾನ ನಿಲ್ದಾಣದ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು. ಎಲ್ಲಿ ಆಗಬೇಕು ಅನ್ನೋದನ್ನು ಕೇಂದ್ರ ಸರ್ಕಾರವೇ ಅಂತಿಮ ಮಾಡುತ್ತದೆ. ನಾವು ಎರಡು-ಮೂರು ಕಡೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಟೆಕ್ನಿಕಲ್ ಆಗಿ ಎಲ್ಲಿ ಅನುಕೂಲ ಇದೆ ಅಲ್ಲಿ ವಿಮಾನ ನಿಲ್ದಾಣ ಆಗುತ್ತದೆ ಎಂದು ಹೇಳಿದರು.

ಕೆಪಿಎಸ್ಸಿ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆಯಲ್ಲ ಎಂಬ ಪ್ರಶ್ನೆಗೆ ಇದಕ್ಕೆ ನಾವೂ ಕೂಡಾ ಸಹಮತ ವ್ಯಕ್ತಪಡಿಸುತ್ತೇವೆ. ಕೆಪಿಎಸ್ಸಿಯಲ್ಲಿ‌ ಅಕ್ರಮದ ಬಗ್ಗೆ ಸೂಕ್ತ ತನಿಖೆಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ಆಗುವ ವಿಶ್ವಾಸ ಇದೆ ಎಂದು ಬಾಲಕೃಷ್ಣ ಉತ್ತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ರಾಜು, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಕೂಟಗಲ್ - ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೇಹಳ್ಳಿ ಗಂಗಾಧರ್ ಮತ್ತಿತರರು ಇದ್ದರು.

28ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಕೂಟಗಲ್ - ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೇಹಳ್ಳಿ ಗಂಗಾಧರ್ ಮತ್ತಿತರರಿದ್ದರು.