ಸಾರಾಂಶ
ಬೋರಾಪುರ ಗ್ರಾಮದ ರೈತ ವೆಂಕಟೇಶ್ ಅವರ ಎಚ್‌ಎಫ್ ಹಸುವಿನ ಕರುವಿಗೆ ಸೂಕ್ತ ಚಿಕಿತ್ಸೆ ಸಿಗದೆ ಅಸುನೀಗಿದೆ. ಇದಕ್ಕೆ ಹೊಣೆ ಯಾರು. ಸುಮಾರು 60ಕ್ಕೂ ಹೆಚ್ಚು ಹಳ್ಳಿ ಹೊಂದಿರುವ ಹೋಬಳಿ ಕೇಂದ್ರದಲ್ಲಿ ಪಶು ವೈದ್ಯರು ಕಾಯಂ ನೇಮಿಸಿಕೊಡಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಶು ಚಿಕಿತ್ಸಾಲಯದಲ್ಲಿ ವೈದ್ಯರಿಲ್ಲದೇ ಕರು ಸಾವನ್ನಪ್ಪಿರುವುದಕ್ಕೆ ರೈತರು ಪ್ರತಿಭಟನೆ ನಡೆಸಿದರು.ಪಟ್ಟಣದ ಪಶು ಆಸ್ಪತ್ರೆ ಮುಂದೆ ಸೋಮವಾರ ರೈತರು, ಪಶುಪಾಲಕರು ಪ್ರತಿಭಟನೆ ನಡೆಸಿ ನಾವು ಜಾನುವಾರುಗಳನ್ನು ಕಷ್ಟಪಟ್ಟು ಸಾಕುತ್ತಿದ್ದೇವೆ. ಹೈನುಗಾರಿಕೆ ನಂಬಿ ಬದುಕುತ್ತಿದ್ದೇವೆ. ರಾಸುಗಳಿಗೆ ರೋಗಬಾಧೆ ಸಮಸ್ಯೆಕಂಡರೆ ಚಿಕಿತ್ಸೆಗೆ ವೈದ್ಯರೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಕ್ಕೇರಿ ಹೋಬಳಿ ದೊಡ್ಡ ಕೇಂದ್ರವಾಗಿದೆ. ಪಶು ಶುಶ್ರೂಷೆಗೆ ಪ್ರಭಾರಿ ವೈದ್ಯರಿದ್ದು ವಾರದ ಒಂದೆರಡು ದಿನ ಬಂದರೆ ಜಾನುವಾರುಗಳ ಗತಿ ಏನು ಎಂದು ಕಿಡಿಕಾರಿದರು.ಬೋರಾಪುರ ಗ್ರಾಮದ ರೈತ ವೆಂಕಟೇಶ್ ಅವರ ಎಚ್‌ಎಫ್ ಹಸುವಿನ ಕರುವಿಗೆ ಸೂಕ್ತ ಚಿಕಿತ್ಸೆ ಸಿಗದೆ ಅಸುನೀಗಿದೆ. ಇದಕ್ಕೆ ಹೊಣೆ ಯಾರು. ಸುಮಾರು 60ಕ್ಕೂ ಹೆಚ್ಚು ಹಳ್ಳಿ ಹೊಂದಿರುವ ಹೋಬಳಿ ಕೇಂದ್ರದಲ್ಲಿ ಪಶು ವೈದ್ಯರು ಕಾಯಂ ನೇಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಳೆದ ಐದಾರು ವರ್ಷಗಳಿಂದ ಇಲ್ಲಿನ ಆಸ್ಪತ್ರೆಗೆ ವೈದ್ಯರೇ ಇಲ್ಲ. ಸಾಸಲು, ಆನೆಗೊಳ, ಮಾದಾಪುರ ಗ್ರಾಮಗಳಲ್ಲಿ ಪಶು ಆಸ್ಪತ್ರೆ ಇದ್ದು, ಮಾದಾಪುರದ ವೈದ್ಯರೇ ಇಡೀ ಹೋಬಳಿ ಆಸ್ಪತ್ರೆ ಉಸ್ತುವಾರಿ ನೋಡಿಕೊಳ್ಳಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕಾಯಿ ಸುರೇಶ್, ಮುಖಂಡರಾದ ಕೆ.ಕೆ.ಚಂದ್ರಶೇಖರ್, ರಘು, ನಿಂಗರಾಜು, ಕೆ.ಜಿ.ತಮ್ಮಣ್ಣ ಭಾಗವಹಿಸಿದ್ದರು.