ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಜಾರಿಗೊಂಡ 371(ಜೆ) ಕಲಂ ಈ ಭಾಗದ ಜನರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಹೈ-ಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಹಾಗೂ 371(ಜೆ) ಹೋರಾಟಗಾರ ರಾಘವೇಂದ್ರ ಕುಷ್ಟಗಿ ಹೇಳಿದ್ದು, ಮತ್ತೊಂದು ಬೃಹತ್ ಜನಾಂದೋಲನಕ್ಕೆ ಕರೆ ನೀಡಿದ್ದಾರೆ.
ಕಾರಟಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಜಾರಿಗೊಂಡ 371(ಜೆ) ಕಲಂ ಈ ಭಾಗದ ಜನರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಹೈ-ಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಹಾಗೂ 371(ಜೆ) ಹೋರಾಟಗಾರ ರಾಘವೇಂದ್ರ ಕುಷ್ಟಗಿ ಹೇಳಿದ್ದು, ಮತ್ತೊಂದು ಬೃಹತ್ ಜನಾಂದೋಲನಕ್ಕೆ ಕರೆ ನೀಡಿದ್ದಾರೆ.
ಪಟ್ಟಣದ ವಿಶೇಷ ಎಪಿಎಂಸಿಯ ಆವರಣದಲ್ಲಿ ಸಮಾವೇಶದ ಕರಪತ್ರ ಹಾಗೂ ಪೋಸ್ಟರ್‌ಗಳನ್ನು ಸೋಮವಾರ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಂಜುಂಡಪ್ಪ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಸಾವಿರಾರು ಕೋಟಿ ರು. ಅನುದಾನ ಮಂಜೂರಾದರೂ, ಭ್ರಷ್ಟಾಚಾರ ಮತ್ತು ದುರುಪಯೋಗದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. 2022ರ ಮಹಾಲೆಕ್ಕ ಪರಿಶೋಧಕರ ವರದಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ₹7 ಸಾವಿರ ಕೋಟಿಗೂ ಅಧಿಕ ಹಣ ದುರುಪಯೋಗಿದೆ ಎಂದು ಉಲ್ಲೇಖಿಸಲಾಗಿದೆ ಎಂದ ಕುಷ್ಟಗಿ, 2025-26ನೇ ಸಾಲಿನಲ್ಲಿ ಸರ್ಕಾರ ಘೋಷಿಸಿರುವ ₹5 ಸಾವಿರ ಕೋಟಿ ಹಣದಲ್ಲಿ ₹800 ಕೋಟಿ ಮಾತ್ರ ಕ್ರಿಯಾ ಯೋಜನೆ ಸಲ್ಲಿಕೆಯಾಗಿದ್ದು, ಉಳಿದ ಅನುದಾನ ಬಳಕೆಯಾಗದೇ ಉಳಿದಿದೆ. ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ಡಬ್ಲ್ಯೂಎಪಿಸಿಒಎಸ್ ಸಂಸ್ಥೆಯಿಂದ ಪರಿಶೀಲನೆ ನಡೆಸಬೇಕೆಂಬ ಆದೇಶ ಜಾರಿಯಾಗಿಲ್ಲ ಎಂದು ದೂರಿದರು.ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 30 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಕೊರತೆ ತೀವ್ರವಾಗಿದೆ. ಗ್ರಾಮೀಣ ಶಾಲೆಗಳ ಪರಿಸ್ಥಿತಿ ಹದಗೆಟ್ಟಿದ್ದು, ಕೆಪಿಎಸ್ ಶಾಲೆಗಳ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಮೇ 24ರಂದು ರಾಯಚೂರು ಎಸ್.ಎಲ್.ವಿ. ಹೋಟೆಲ್ ಆವರಣದಲ್ಲಿರುವ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ 371(ಜೆ) ಕಲಂ ಹೋರಾಟಗಾರರ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಸ್ಥಾಪಿಸಲಾಗುವುದು ಎಂದರು.ಈ ಸಭೆಗೆ 371(ಜೆ) ಹೋರಾಟದಲ್ಲಿ ಸದಾ ಬೆಂಬಲವಾಗಿ ನಿಂತು ಅಂದು ನಮ್ಮ ಹೋರಾಟಕ್ಕೆ ಶಕ್ತಿ ತುಂಬಿದ, ಕಾರಟಗಿ ಭಾಗದ 371(ಜೆ) ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇಲ್ಲಿನ ಜನಪ್ರತಿನಿಧಿಗಳು, ಉದ್ಯಮಿಗಳು, ವರ್ತಕರು, ರೈತ ಪರ ಮುಖಂಡರನ್ನು ಆಹ್ವಾನಿಸುತ್ತಿದ್ದೇವೆ. ನಮ್ಮ ಪ್ರದೇಶ ಹಿಂದುಳಿದಿರುವುದಕ್ಕೆ ಕಾರಣ ಮತ್ತು ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿ, ಕಾರ್ಯಗತಗೊಳಿಸುವ ಬಗ್ಗೆ ಸಲಹೆ, ಸೂಚನೆಗಳನ್ನು ನೀಡುವಂತೆ ಕೋರುತ್ತೇವೆ. ನಮ್ಮ ಭಾಗದ ಜನರ ಜೀವನದ ಅಸ್ಮಿತೆಯ ಪ್ರಶ್ನೆ ಇದಾಗಿರುವುದರಿಂದ ಎಲ್ಲರ ಉಪಸ್ಥಿತಿ ಮಹತ್ವದ್ದಾಗಿದೆ ಎಂದರು.
ಈ ವೇಳೆ ಜಾಗ್ರತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಶರಣಪ್ಪ ಕೋಟ್ಯಾಳ, ವೀರಣ್ಣ ಶೆಟ್ಟಿ, ವೆಂಕಟೇಶ ಈಡಿಗೇರ್, ಜನ ಸಂಗ್ರಾಮ ಪರಿಷತ್ ರಾಯಚೂರು, ಜಾಗ್ರತ ಯುವಕ ಸಂಘದ ಸದಸ್ಯರು ಇದ್ದರು.371(ಜೆ) ಕಲಂ ಕನಸು ನುಚ್ಚುನೂರು: ರಾಘವೇಂದ್ರ ಕುಷ್ಟಗಿ
ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡು ಸಂವಿಧಾನದ 371(ಜೆ) ಕಲಂ ತಿದ್ದುಪಡಿಗಾಗಿ ಹೋರಾಡಿದ ಹೋರಾಟಗಾರರ ಆಸೆಗಳು ನುಚ್ಚುನೂರಾಗಿವೆ. ಕಲ್ಯಾಣ ಕರ್ನಾಟಕ 6 ಜಿಲ್ಲೆಗಳ 40ಕ್ಕಿಂತ ಹೆಚ್ಚು ಶಾಸಕರು, ಮಂತ್ರಿಗಳು, ಸಂಸತ್ತು ಸದಸ್ಯರು ಮತ್ತು ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಭಾಗವಾಗಿದ್ದರೂ ರಾಜ್ಯದ ಇತರ ಪ್ರದೇಶಗಳ ಸರಿಸಮವಾಗಿ ಈ ಪ್ರದೇಶವನ್ನು ಮೇಲೆತ್ತುವಲ್ಲಿ ವಿಫಲವಾಗಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ 371(ಜೆ) ಹೋರಾಟಗಾರರ ಮತ್ತು ಜನಪರ ಸಂಘಟನೆಗಳ ಸಮಾವೇಶವನ್ನು ಹಾಗೂ ಚುನಾಯಿತ ಪ್ರತಿನಿಧಿಗಳ, ಮಾಜಿ ಜನಪ್ರತಿನಿಧಿಗಳ, ದುಂಡುಮೇಜಿನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ರಾಘವೇಂದ್ರ ಕುಷ್ಟಗಿ ಹೇಳಿದರು.