ಸಾರಾಂಶ
ಶೃಂಗೇರಿ: ದಶಕಗಳ ಹಿಂದೆ ಪಶ್ಚಿಮಘಟ್ಟದ ತಪ್ಪಲಲ್ಲಿ ನಕ್ಸಲ್ ಚಟುವಟಿಕೆಗಳು ಸಕ್ರಿಯವಾಗಿದ್ದ ಸಂದರ್ಭ ಮಲೆನಾಡಿನ ಬಹುತೇಕ ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್‌ಗಳು ಅಲ್ಲಲ್ಲಿ ಕಂಡುಬರುತ್ತಿದ್ದವು. ಸರ್ಕಾರ ಅಂತಹ ಪ್ರದೇಶಗಳಲ್ಲಿ ಮೂಲಸೌಕರ್ಯ ನೀಡಿ ಅಭಿವೃದ್ಧಿಪಡಿಸುವುದರ ಮೂಲಕ ಜನರ ಮನವೊಲಿಸಿ ಬಿಗಿ ಬಂದೋಬಸ್ತ್ ಮೂಲಕ ಶಾಂತಿಯುತ ಮತದಾನ ನಡೆಯುತ್ತಿತ್ತು.
ಆದರೀಗ ಜನರು ತಮ್ಮ ಪ್ರಮುಖ ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಚುನಾವಣಾ ಬಹಿಷ್ಕಾರದ ಹಾದಿ ಹಿಡಿದಿದ್ದಾರೆ. ಗ್ರಾಮೀಣ ಭಾಗಗಳಲ್ಲಿ, ಕಾಲೋನಿಗಳಲ್ಲಿ ಕುಡಿಯುವ ನೀರು ಸೇರಿ ವಿವಿಧ ಮೂಲಭೂತ ಸೌಕರ್ಯಗಳ ಸಮಸ್ಯೆ ಮುಂದಿಟ್ಟುಕೊಂಡು ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸುವುದರ ಮೂಲಕ ಗಮನ ಸೆಳೆಯುತ್ತಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಎಲ್ಲಾ ಚುನಾವಣೆ ಬಹಿಷ್ಕಾರದ ಬ್ಯಾನರ್‌ಗಳಲ್ಲಿ ಪ್ರಮುಖವಾಗಿ ಕಂಡುಬರುವ ವಿಷಯ. ಸೆಕ್ಷನ್ 4(1), ಸೆಕ್ಷನ್ 17, ಮೀಸಲು ಅರಣ್ಯ, ಇಲಾಖೆಯ ಅಧಿಕಾರಿಗಳ ಕಿರುಕುಳದ ವಿರುದ್ಧ ಚುನಾವಣೆ ಬಹಿಷ್ಕಾರದ ಮೂಲಕ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಾಗಲೇ ತಾಲೂಕಿನ ಮರ್ಕಲ್ ಪಂಚಾಯಿತಿ ಯಡದಳ್ಳಿ, ಮೆಣಸೆ ಪಂಚಾಯಿತಿ ಮಸಿಗೆ ಗ್ರಾಮ, ನೆಮ್ಮಾರು ಪಂಚಾಯಿತಿ ನೆಮ್ಮಾರು ಎಸ್ಟೇಟ್‌ಗಳಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್‌ಗಳು ರಾರಾಜಿಸತೊಡಗಿವೆ.
ತಾಲೂಕಿನ ಬಹುತೇಕ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾಕಷ್ಟು ಗ್ರಾಮಗಳು 4 (1) ವ್ಯಾಪ್ತಿಗೆ ಒಳಪಟ್ಟಿವೆ. ಮನೆಗಳು, ಜಮೀನುಗಳು, ಧಾರ್ಮಿಕ ಕೇಂದ್ರಗಳು, ರಸ್ತೆಗಳು ಮೀಸಲು ಅರಣ್ಯವ್ಯಾಪ್ತಿಯೊಳಗೆ ಬರುತ್ತವೆ. ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಾರೆ ಎಂಬುದು ಗ್ರಾಮಸ್ಥರ ಅಳಲಾಗಿದೆ.ಇನ್ನು ಕುಡಿಯುವ ನೀರಿನ ಸಮಸ್ಯೆ ಇಡೀ ತಾಲೂಕನ್ನೇ ಕಾಡುತ್ತಿದೆ. ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಉತ್ತಮ ಯೋಜನೆಯಾಗಿದ್ದರೂ ಇದು ನಿಜವಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅನಗತ್ಯ ಕಡೆಗಳಲ್ಲಿ ಸಾಲುಗಟ್ಟಿ ನೀರಿನ ನಲ್ಲಿಗಳು ಕಂಡುಬರುತ್ತಿದ್ದು, ಅಗತ್ಯವಾಗಿ ಕುಡಿಯುವ ನೀರಿನ ಅವಶ್ಯಕತೆಯಿದ್ದ ಕಡೆ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿ ನೆಮ್ಮಾರು ಎಸ್ಟೇಟ್ ಗ್ರಾಮ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ಇಲ್ಲಿ ಜೆಜೆಎಂ ಸಂಪೂರ್ಣ ವಿಫಲವಾಗಿದೆ. ಹೀಗೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಜೆಜೆಎಂ ಯೋಜನೆ ಉಪಯೋಗಕ್ಕೆ ಬಾರದಿರುವುದು ಕಂಡುಬರುತ್ತಿದೆ.
ಇನ್ನು ನಿವೇಶನ, ರಸ್ತೆ, ಸೇತುವೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕಾರ ಹಾಕುತ್ತಿರುವುದು ಕಂಡುಬರುತ್ತಿದೆ. ಇಲ್ಲಿಯವರೆಗೆ ಎಚ್ಚೆತ್ತು ಕೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರ ಬ್ಯಾನರ್ ಕಂಡೊಡನೆ ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಈ ಸಮಯದಲ್ಲಿ ಮಾತ್ರ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ತಮ್ಮ ಸಮಸ್ಯೆಗೆ ಕೂಡಲೇ ಸ್ಪಂದಿಸುತ್ತಾರೆ ಎಂದರಿತ ಜನತೆ ಚುನಾವಣೆ ಬಹಿಷ್ಕಾರ ಹಾಕುತ್ತಿರುವುದು ಸರ್ವೇಸಾಮಾನ್ಯವಾಗಿ ಕಂಡು ಬರುತ್ತಿದೆ.