ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿಗಳನ್ನು ವಿರೋಧಿಸಿ ಫೆಬ್ರವರಿ ೧೨ರಂದು ಅಖಿಲ ಭಾರತ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ್ ಹಮ್ಮಿಕೊಂಡಿದ್ದು, ತಿಪಟೂರಿನಲ್ಲಿ ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿಗಳನ್ನು ವಿರೋಧಿಸಿ ಫೆಬ್ರವರಿ ೧೨ರಂದು ಅಖಿಲ ಭಾರತ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ್ ಹಮ್ಮಿಕೊಂಡಿದ್ದು, ತಿಪಟೂರಿನಲ್ಲಿ ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ಕರೆ ನೀಡಿದರು.ತಿಪಟೂರು ನಗರದ ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಮಿಕ ಮತ್ತು ರೈತ ಸಂಘಟನೆಯ ಜಂಟಿ ಸಮಾವೇಶದಲ್ಲಿ ಮಾತನಾಡಿ ಅವರು, ಕಾರ್ಮಿಕರು ೮ ಗಂಟೆ ಕೆಲಸ ಮಾಡುವ, ಮುಷ್ಕರ ನಡೆಸುವ ಕಾನೂನು ಅವಕಾಶಗಳು ಇದ್ದವು. ಹೊಸ ಕಾನೂನುಗಳು ಕಾರ್ಮಿಕರು ಮುಷ್ಕರ ವನ್ನೂ ನಡೆಸಲು ಆಗದ ರೀತಿಯ ಕಾನೂನು ಮಾಡಲು ಕೇಂದ್ರ ಸರ್ಕಾರ ಹೊರಟಿದ್ದು ಅದರ ವಿರುದ್ಧದ ಹೋರಾಟ ಎಂದರು.ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್ ಮಾತನಾಡಿ, ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ನಾಶ ಮಾಡಲು ಹೊರಟಿದ್ದು ಕೃಷಿ ಕೂಲಿಕಾರರ ಕೈಯಿಂದ ಕೆಲಸ ಕಿತ್ತುಕೊಳ್ಳುತ್ತಿದೆ. ಕಟಾವಿನ ಮಹತ್ತರ ಸಮಯದಲ್ಲಿ ಕೆಲಸ ಇಲ್ಲ ಎಂಬುದು, ತಮ್ಮ ಜಮೀನನ್ನು ಅಭಿವೃದ್ಧಿಪಡಿಸಿಕೊಳ್ಳಲು, ರೈತರು ಕನಿಷ್ಠ ಬದುಕು ಬದುಕಲು ಇದ್ದ ನರೇಗಾ ಯೋಜನೆಯನ್ನು ಮಣ್ಣು ಪಾಲು ಮಾಡುತ್ತಿರುವ ಸರ್ಕಾರಗಳ ನೀತಿಗಳ ವಿರುದ್ಧ ಫೆಬ್ರವರಿ ೧೨ರ ಹೋರಾಟವನ್ನು ತಿಪಟೂರು ನಗರದಲ್ಲಿರುವ ನಾವು ನೀವುಗಳೆಲ್ಲರೂ ಯಶಸ್ವಿ ಮಾಡಬೇಕಿದೆ. ಅದರ ಭಾಗವಾಗಿ ನಡೆಯುತ್ತಿರುವ ಈ ಸಮಾವೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿರುವ ಜನ ನೋಡಿದರೆ ಹೋರಾಟದ ಯಶಸ್ಸಿನ ಮುನ್ಸೂಚನೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಚನ್ನಬಸವಣ್ಣ ಮಾತನಾಡಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಳುವ ಪಕ್ಷಗಳು ತಯಾರಿಲ್ಲ. ಪೋಡಿ ಮತ್ತು ಪವತಿ ಖಾತೆ ಮಾಡಿಸಲು ರೈತರು ಅಲೆಯುವಂತಾಗಿದೆ ಸರ್ಕಾರ ಸಮಸ್ಯೆ ಪರಿಹರಿಸದಿದ್ದರೆ ಅನಿರ್ದಿಷ್ಠಾವಧಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ಸಮಾವೇಶದಲ್ಲಿ ಡಿಎಸ್‌ಎಸ್ ನ ಜಿಲ್ಲಾಧ್ಯಕ್ಷರಾದ ಕುಂದೂರು ತಿಮ್ಮಯ್ಯ , ಎಐಕೆಕೆಎಂಎಸ್‌ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸ್ವಾಮಿ, ರೈತ ಸಂಘದ ದೇವರಾಜು ತಿಮ್ಲಾಪುರ, ಟಿಬಿ ಜಯಾನಂದಯ್ಯ, ಅಂಗನವಾಡಿ ನೌಕರರ ತಾಲೂಕು ಅಧ್ಯಕ್ಷರಾದ ಅನಸೂಯ, ಸೌಹಾರ್ದ ಸಂಘಟನೆಯ ಅಲ್ಲಾಬಕಾಶ್, ಭೋವಿ ಸಮಾಜದ ಮುಖಂಡ ಶಶಿಧರ್, ಮುಸ್ಲಿಂ ಮುಖಂಡರಾದ ಶಫಿವುಲಾ ಶರೀಫ್ ಮಾತನಾಡಿದರು. ವೇದಿಕೆಯಲ್ಲಿ ಬಗರ್ ಹುಕುಂ ಹೋರಾಟ ಸಮಿತಿಯ ಅಧ್ಯಕ್ಷರಾದ ಮಲ್ಲಿಕಣ್ಣ, ಪ್ರಾಂತ ರೈತ ಸಂಘದ ರಾಜಮ್ಮ, ಕೊಟ್ರೇಶ್, ಅಂಗನವಾಡಿ ನೌಕರರ ಸಂಘದ ಗಾಯತ್ರಿ, ಮಮತಾ, ಶಿವಮ್ಮ, ಮುಸ್ಲಿಂ ಮುಖಂಡ ಹಾಗೂ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ಸಮೀಉಲ್ಲಾ, ನಿವೃತ್ತ ಉಪನ್ಯಾಸಕ ಅಯಾಜ್, ಕಾರ್ಮಿಕ ಸಂಘದ ಪ್ರಕಾಶ್ ರಮೇಶ್ ಸೇರಿ ೧೫೦ಕ್ಕೂ ಹೆಚ್ಚು ಪ್ರಗತಿಪರ ಹಾಗೂ ರೈತಪರ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.