ಸಾರಾಂಶ
ಗ್ರಾಮದ ಜನರು ನರೇಗಾ ಯೋಜನೆಯ ಮೂಲಕ ಹಲವಾರು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಬಹುದು.
ಬೂದಗುಂಪಾ ಗ್ರಾಪಂ ವತಿಯಿಂದ ಯಶಸ್ವಿ ಗ್ರಾಮಸಭೆ
ಕನ್ನಡಪ್ರಭ ವಾರ್ತೆ ಕಾರಟಗಿಮನರೇಗಾ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆಯಲು ಗ್ರಾಮಸ್ಥರಿಗೆ ಬೂದಗುಂಪಾ ಪಿಡಿಒ ವೆಂಕಟೇಶ್ ನಾಯಕ ಹೇಳಿದರು.
ತಾಲೂಕಿನ ಬೂದಗುಂಪಾ ಗ್ರಾಪಂನಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲು ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮದ ಜನರು ನರೇಗಾ ಯೋಜನೆಯ ಮೂಲಕ ಹಲವಾರು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಬಹುದು. ನರೇಗಾದಡಿ ಅರ್ಹ ಕುಟುಂಬಗಳಿಗೆ ವರ್ಷದಲ್ಲಿ 100 ದಿನ ಕೆಲಸ ಒದಗಿಸಲಾಗಿದ್ದು, ಪ್ರತಿ ದಿನಕ್ಕೆ ₹349 ಕೂಲಿ ಪಾವತಿಸಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಯೋಜನೆಯಡಿ ಕ್ಯೂಆರ್ ಕೋಡ್ ಬಳಸಿ ಸಲ್ಲಿಸಿದ ಬೇಡಿಕೆಗಳ ಕಾಮಗಾರಿಗಳ ಪರಿಶೀಲನೆ ಮಾಡಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.ಗ್ರಾಮಸಭೆ ನೋಡಲ್ ಅಧಿಕಾರಿಗಳು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ವಿನಾಯಕ ಮುತ್ತು ಅವರು ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನ ಮಾಡಿಕೊಳ್ಳುವ ನರೇಗಾ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.
ತಾಪಂ ಐಇಸಿ ಸಂಯೋಜಕ ಸೋಮನಾಥ ಮಾತನಾಡಿ, ನರೇಗಾ ಯೋಜನೆಯಿಂದ ಕೂಲಿಕಾರರ ಜೀವನಕ್ಕೆ ಭದ್ರತೆ ಒದಗಿಸುವುದು. ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು. ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಿ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಒದಗಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಯೋಜನೆ ಸಹಕಾರಿಯಾಗಿದೆ ಎಂದರು.ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸಭೆಯಲ್ಲಿ 3 ಗ್ರಾಮಗಳಿಂದ ಮನೆ ಮನೆ ಭೇಟಿ ಹಾಗೂ ವಾರ್ಡ್‌ಸಭೆಯಲ್ಲಿ ಬಂದ ಬೇಡಿಕೆಯ ಅರ್ಜಿಗಳನ್ನು ಓದಿ ಹೇಳಲಾಯಿತು.
ಗ್ರಾಪಂ ಅಧ್ಯಕ್ಷೆ ದೇವಮ್ಮ ಸುರೇಶ್ ಬೆಳ್ಳಿಕಟ್ಟಿ, ಉಪಾಧ್ಯಕ್ಷ ಭೀಮನಗೌಡ ಜುಟ್ಲಾದ್, ಸದಸ್ಯರಾದ ಶ್ರೀಧರ ಗೋನಾಳ್, ಮೈಬೂಬ್ ಜಮದಾರ, ಷಣ್ಮುಖಪ್ಪ ಎನ್., ಭೀಮಮ್ಮ ತಳವಾರ, ಮೌಲಾಬಿ ದೊಡ್ಡಮನಿ, ಗ್ರಾಪಂ ಸಿಬ್ಬಂದಿ ರಾಮಣ್ಣ, ಬಸವರಾಜ್, ಬಸನಗೌಡ, ಪೂಜಾ ಇದ್ದರು.