ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಖಂಡನೀಯ. ಇಮಾಮ್ ಸಾಬಿಗೂ ಗೋಕುಲಾಷ್ಠಮಿಗೂ ಏನು ಸಂಬಂಧ? ವಿಜಯದಶಮಿ ಬಗ್ಗೆ ಭಕ್ತಿ ಇಲ್ಲದ ಟಿಪ್ಪು ಸಂತತಿಯನ್ನು ಕರೆಸಿ ರಾಜ್ಯ ಸರ್ಕಾರ ನಾಡಿಗೆ ದ್ರೋಹ ಬಗೆಯುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.ಹಿಂದೂ ಕ್ಷೇತ್ರಗಳ ಮೇಲಿನ ಇಂತಹ ದಾಳಿ ತಡೆಯಲು ಮುಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಧಾರ್ಮಿಕ ಶಿಷ್ಟಾಚಾರ ಕಾನೂನು ತರುತ್ತೇವೆ ಎಂದೂ ಅವರು ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದಸರಾ ಉತ್ಸವವನ್ನು ನಿಸಾರ್ ಅಹ್ಮದ್ ಉದ್ಘಾಟಿಸಿದ್ದರು ಎನ್ನುತ್ತೀರಿ. ಅವರು ನಿತ್ಯೋತ್ಸವದ ಮೂಲಕ ಜೋಗದ ಸಿರಿ, ರಾಜ್ಯದ ನದಿಗಳ ಬಗ್ಗೆ ಬರೆದಿದ್ದರು. ಅವರು ಯಾವತ್ತೂ ಧರ್ಮದ ವಿರುದ್ಧ ಮಾತನಾಡಿರಲಿಲ್ಲ. ನಾನು ಕಂದಾಯ ಸಚಿವನಾಗಿದ್ದಾಗ ಅವರಿಗೆ ಚಿಕ್ಕಬಳ್ಳಾಪುರದಲ್ಲಿ ಐದು ಎಕರೆ ಭೂಮಿ ಕೊಟ್ಟಿದ್ದೆ. ಅವರಿಗೆ ಯಾಕೆ ಬಾನು ಅವರನ್ನು ಹೋಲಿಕೆ ಮಾಡ್ತೀರಿ ಎಂದು ಪ್ರಶ್ನಿಸಿದರು.ದಸರಾ ಉದ್ಘಾಟನೆಗೆ ಕುರುಬರಲ್ಲಿ ಯಾರೂ ಸಿಗಲಿಲ್ಲವೇ? ಒಕ್ಕಲಿಗ, ಹಿಂದುಳಿದ ಜನ, ಪರಿಶಿಷ್ಟರು ಇರಲಿಲ್ಲವೇ? ಆಪರೇಷನ್ ಸಿಂಧೂರದಲ್ಲಿ ದೇಶಕ್ಕಾಗಿ ಹೋರಾಡಿದವರನ್ನು ಕರೆಯಬಹುದಿತ್ತಲ್ಲವೇ? ಯದುವಂಶದವರನ್ನು ಸೆರೆಯಲ್ಲಿಟ್ಟ ಟಿಪ್ಪು ಸಂತತಿಯನ್ನೇ ಕರೆದು ಮಾಡಬೇಕೇ? ಹಿಂದೂಗಳಲ್ಲಿ ಒಳ್ಳೆಯ ಕವಿಗಳೇ ಇರಲಿಲ್ಲವೇ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಧಾರ್ಮಿಕ ಶಿಷ್ಟಾಚಾರ ಕಾನೂನು ತರುತ್ತೇವೆ:ಚಾಮುಂಡಿ ಬೆಟ್ಟದ ಸುತ್ತ ರಾಜಕೀಯ ನಡೆದಿದೆ ಎಂಬ ಪ್ರಮೋದಾದೇವಿ ಹೇಳಿಕೆ ಸರಿಯಾಗಿದೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಒಲೈಕೆ ಮಾಡ್ತಿದ್ದಾರೆ. ಹಿಂದೂ ಭಾವನೆಗಳಿಗೆ ಆಘಾತ ಮಾಡಿದ್ದಾರೆ. ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತೆ. ಆಗ ನಾವು ಧಾರ್ಮಿಕ ಶಿಷ್ಟಾಚಾರ ಕಾನೂನು ತರುತ್ತೇವೆ. ಇಲ್ಲದಿದ್ದರೆ ಕುತಂತ್ರ ಮಾಡುತ್ತಲೇ ಇರುತ್ತಾರೆ ಎಂದು ಅಶೋಕ್ ಹೇಳಿದರು.
ಧರ್ಮಸ್ಥಳ ಲೂಟಿಗೆ ಕೈ ದಾಳಿ: ಅಶೋಕ್ಧರ್ಮಸ್ಥಳದ ಮೇಲೆ ಕುತಂತ್ರ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಗತಿಪರರು, ನಗರ ನಕ್ಸಲರು ಸಿದ್ದರಾಮಯ್ಯ ಹಿಂದೆ ಕೋಟೆ ರಚಿಸಿದ್ದಾರೆ. ಇವರೆಲ್ಲ ಸೇರಿ ಧರ್ಮಸ್ಥಳವನ್ನು ಅತಂತ್ರ ಮಾಡಿದ್ದಾರೆ. ಆ ಕ್ಷೇತ್ರವನ್ನೂ ಯಾವುದಾದರೂ ಟ್ರಸ್ಟ್ ಮಾಡಿ ಲೂಟಿಗೆ ಹೊರಟಿದ್ದಾರೆ. ಘಸ್ನಿ ಮಹಮದ್ ರೀತಿ ಧರ್ಮಸ್ಥಳ ಲೂಟಿಗೆ ಶ್ರೀ ಕ್ಷೇತ್ರದ ಮೇಲೆ ಕಾಂಗ್ರೆಸ್ ದಾಳಿ ಮಾಡಿದೆ. ಸಾಮಾನ್ಯ ಜ್ಞಾನ ಇದ್ದಿದ್ದರೆ ತನಿಖೆ ಮಾಡುವ ಬದಲು ದೂರು ನೀಡಿದವರನ್ನು ಬಂಧಿಸುತ್ತಿದ್ದರು ಎಂದು ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.