ಸಾರಾಂಶ
ಹಾನಗಲ್ಲ: ತಾಲೂಕಿನ ಹೇರೂರು ಗ್ರಾಮದಲ್ಲಿ ದೇವಿ ಆದಿಶಕ್ತಿ ಹೆಸರಿನಲ್ಲಿ ಸಾಂಪ್ರದಾಯಿಕವಾಗಿ ಬಿಟ್ಟ ಗೋವೊಂದು ಮಂಗಳವಾರ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಇದರೊಂದಿಗಿದ್ದ ಎರಡು ಕರುಗಳು ಈ ಗೋವನ್ನು ಬಿಟ್ಟು ಕದಲದೇ ಅಲ್ಲಿಯೇ ರೋದಿಸುತ್ತಿರುವ ದೃಶ್ಯ ಮನ ಮಿಡಿಯುವಂತಿತ್ತು.
ಈ ಎರಡು ಕರುಗಳು ಮೇವು ತಿನ್ನದೆ ನೀರನ್ನೂ ಕುಡಿಯದೇ ಅಲ್ಲಿಯೇ ನಿಂತಿವೆ. ಇಲ್ಲಿಗೆ ಬಂದ ಜನರು ಈ ಕರುವನ್ನು ಬೇರೆಡೆಗೆ ಕಳಿಸಲು ಮಾಡಿದ ಯತ್ನವೂ ವಿಫಲವಾಗಿದೆ. ಈ ಕರುಗಳು ಇದೇ ಗೋವಿನ ಕರುಗಳಲ್ಲ. ಆದರೆ ಭಕ್ತರು ದೇವಿಗಾಗಿ ಬಿಟ್ಟ ಕರುಗಳು ಇವಾಗಿವೆ. ಆದಾಗ್ಯೂ ಈ ಹಿರಿಯ ಗೋವಿನೊಂದಿಗೆ ಅತ್ಯಂತ ಆಪ್ತವಾಗಿದ್ದವು ಎನ್ನಲಾಗಿದೆ. ಇದೆಲ್ಲವೂ ಊರ ಜನರಿಗೆ ಅಚ್ಚರಿಯ ಸಂಗತಿಯೂ ಆಗಿದೆ.ಊರಿನಲ್ಲಿ ನಾಲ್ಕಾರು ದೇವರಿಗೆ ಬಿಟ್ಟ ಗೋವುಗಳಿವೆ. ಎಲ್ಲ ಗೋವುಗಳು ಒಟ್ಟಾಗಿದ್ದು ದಿನವಿಡಿ ಮೇವು ಸ್ವೀಕರಿಸಿ ಒಟ್ಟಾಗಿ ಜೀವಿಸುತ್ತಿದ್ದವು. ಈ ಗೋವುಗಳನ್ನು ಯಾರು ಮನೆಯಲ್ಲಿ ಕಟ್ಟುವ ಸಂಪ್ರದಾಯವಿಲ್ಲ. ಎಲ್ಲೆಂದರಲ್ಲಿ ಮೇವು ತಿಂದು ಬದುಕುವುದು ಹಾಗೂ ಇಡೀ ಊರಿನ ಜನರು ಈ ಗೋವುಗಳನ್ನು ಭಕ್ತಿ ಶ್ರದ್ಧೆಯಿಂದ ಕಾಣುವುದು ಇಲ್ಲಿನ ಸಂಪ್ರದಾಯ. ಮಂಗಳವಾರ ಬೆಳಗಿನ 3-4 ಗಂಟೆಯ ಹೊತ್ತಿಗೆ ಊರಿನಲ್ಲೇ ದೇವಿ ಮಂದಿರದ ಬಳಿ ಇರುವ ವಿದ್ಯುತ್ ಕಂಬದಲ್ಲಿ ವಿದ್ಯುತ್ ಹರಿದು ಅದಕ್ಕೆ ಸ್ಪರ್ಶಿಸಿದ ಗೋವು ಸಾವನ್ನಪ್ಪಿದೆ ಎಂದು ತಿಳಿದಿದೆ.ಊರ ಜನರು ಈ ಗೋವಿನ ಶವವನ್ನು ಟ್ರ್ಯಾಕ್ಟರ್‌ನಲ್ಲಿ ಇಟ್ಟುಕೊಂಡು ಊರ ತುಂಬ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ, ಗುಬ್ಬಿ ಅಜ್ಜನ ಮಠದ ಬಳಿ ದಫನ್ ಮಾಡಲಾಯಿತು. ಇದರ ತಾಯಿಯನ್ನು ಸಹ ಇಲ್ಲೇ ದಫನ್ ಮಾಡಲಾಗಿದೆಯಂತೆ.