ಸಾರಾಂಶ
- ಹೆಬ್ಬಾಳು ಗ್ರಾಪಂ ಕಚೇರಿ ಎದುರು ಪದಾಧಿಕಾರಿಗಳ ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಬರ ಪರಿಹಾರ ವಿತರಣೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಪದಾಧಿಕಾರಿಗಳು ಹೆಬ್ಬಾಳು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.ಅಖಿಲ ಭಾರತ ಬೇಡಿಕೆ ದಿನಗಳ ಭಾಗವಾಗಿ ಪ್ರತಿಭಟನೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಘಟಕ ಮಂಜುನಾಥ ರೆಡ್ಡಿ ಈ ಸಂದರ್ಭ ಮಾತನಾಡಿ, ರೈತರು ದೇಶದ ಬೆನ್ನೆಲುಬು. ಆದರೆ, ಇಲ್ಲಿಯವರೆಗೂ ಆಳಿರುವ ಸರ್ಕಾರಗಳ ನೀತಿಗಳಿಂದ ಅವರ ಬದುಕು ಅತ್ಯಂತ ದುಸ್ಥಿತಿಗೆ ಬಂದಿದೆ. ರೈತರ ಬೆನ್ನೆಲುಬನ್ನೇ ಮುರಿದುಹಾಕಲಾಗಿದೆ. ವ್ಯವಸಾಯು ಲಾಭರಹಿತ ಉದ್ದಿಮೆಯಾಗಿ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ, ಆತ್ಮಹತ್ಯೆಗೆ ಮೊರೆಹೋಗುವಂತೆ ಮಾಡಿವೆ. ರೈತರು ಬಳಸುವ ಒಳಸುರಿಗಳಾದ ಗೊಬ್ಬರ, ಬೀಜ, ಕೀಟನಾಶಕ ವ್ಯವಸಾಯಕ್ಕೆ ಬಳಸುವ ಸಲಕರಣೆ ಮತ್ತು ಯಂತ್ರಗಳ ಬೆಲೆಗಳು ಬಾರಿ ದುಬಾರಿಯಾಗಿವೆ. ಇದರಿಂದ ರೈತರ ಕೃಷಿ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಆದರೆ, ಉತ್ಪನ್ನಗಳ ಬೆಲೆ ಏರಿಕೆ ಇಲ್ಲದೇ ನಷ್ಟಕ್ಕೆ ಈಡಾಗುತ್ತಿದ್ದಾರೆ ಎಂದು ದೂರಿದರು.ರೈತರು ಜಮೀನು ಮಾರಾಟ ಮಾಡಿ, ಕೃಷಿ ಕಾರ್ಮಿಕನಾಗುತ್ತಿದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ಕೆಲವೊಮ್ಮೆ ಅತಿ, ಅನಾವೃಷ್ಠಿಗೆ ಸಿಲುಕಿ ಕಂಗಾಲಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜೀವನಗೈಯ್ಯಲು ನಗರ, ಪಟ್ಟಣಗಳಿಗೆ ವಲಸೆ ಹೋಗಲೇಬೇಕಾದ ಪರಿಸ್ಥಿತಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನ್ಯಾಯೋಚಿತ ಬೇಡಿಕೆ ಈಡೇ ರಿಸುವಂತಾಗಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧ ಮಾಡುವ ಜೊತೆಗೆ ರೈತರ ಸಾಲ ಮನ್ನಾ ಮಾಡಬೇಕು. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ, ದಿನದ ಕೂಲಿ ₹600ಕ್ಕೆ ಹೆಚ್ಚಿಸಬೇಕು. ಬಿತ್ತನೆಬೀಜ, ಗೊಬ್ಬರ, ಕೀಟನಾಶಕ ಹಾಗೂ ಇನ್ನಿತರ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ನೀಡಬೇಕು. ಗುಣಮಟ್ಟ ಪರೀಕ್ಷೆಯನ್ನು ಹಿಂತೆಗೆದು ಹಾಲಿನ ಪ್ರೋತ್ಸಾಹ ಧನವನ್ನು ₹10 ದರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ್ಷೆಮಧು ತೊಗಲೇರಿ, ಉಪಾಧ್ಯಕ್ಷ ಬಸವರಾಜಪ್ಪ ನಿರ್ಥಡಿ, ಸಹ ಕಾರ್ಯದರ್ಶಿ ಲೋಕೇಶ್ ನೀರ್ಥಡಿ, ನಾಗರಾಜ ರಾಮಗೊಂಡನಹಳ್ಳಿ, ರಾಜು, ಚಂದ್ರಪ್ಪ ಹೆಬ್ಬಾಳು, ಗೋವಿಂದಪ್ಪ ಹೆಬ್ಬಾಳು, ಗುಡಾಳ್ ರಾಜಪ್ಪ, ಬೀರಲಿಂಗಪ್ಪ ಇತರರು ಇದ್ದರು.
- - - -16ಕೆಡಿವಿಜಿ37ಃ:ಎಐಕೆಕೆಎಂಎಸ್ ಸಂಟನೆಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ದಾವಣಗೆರೆ ತಾಲೂಕು ಹೆಬ್ಬಾಳು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.