ಟಿಕೆಟ್‌ ತಪ್ಪಿದರೂ ಅಸೂಟಿ ಪರ ಪ್ರಚಾರ: ಲಿಂಬಿಕಾಯಿ

| Published : Mar 26 2024, 01:01 AM IST

ಸಾರಾಂಶ

ಟಿಕೆಟ್‌ ನೀಡುವುದಾಗಿ ಹೇಳಿ ಕೊನೆ ಘಳಿಗೆಯಲ್ಲಿ ಪಕ್ಷ ಕೈಕೊಟ್ಟರೂ, ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.

ಹುಬ್ಬಳ್ಳಿ:

ಟಿಕೆಟ್‌ ನೀಡುವುದಾಗಿ ಹೇಳಿ ಕೊನೆ ಘಳಿಗೆಯಲ್ಲಿ ಪಕ್ಷ ಕೈಕೊಟ್ಟರೂ, ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಮಾಜಿ ಎಂಎಲ್‌ಸಿ ಮೋಹನ ಲಿಂಬಿಕಾಯಿ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ನೆಪದಲ್ಲಿ ನನಗೆ ಟಿಕೆಟ್‌ ತಪ್ಪಿಸಲಾಗಿದೆ. ಈ ಹಿಂದೆ ಬಿಜೆಪಿಯಲ್ಲಿ ಇದ್ದಾಗ ಅನ್ಯಾಯವಾಗಿತ್ತು. ಕಾಂಗ್ರೆಸ್‌ ಸೇರಿದ ಬಳಿಕ ಪಶ್ಚಿಮ ಕ್ಷೇತ್ರದ ಸ್ಪರ್ಧೆಗೆ ಅವಕಾಶ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಅದು ಹುಸಿಯಾಯಿತು. ಈಗ ಲೋಕಸಭೆ ಚುನಾವಣೆ ಸ್ಪರ್ಧೆಗೆ ತಯಾರಿ ನಡೆಸಲು ಸೂಚಿಸಿ ಟಿಕೆಟ್‌ ತಪ್ಪಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಪರ ಒಲವು ವ್ಯಕ್ತಪಡಿಸಿದ್ದರಿಂದ, ಸ್ಪರ್ಧಿಸಿದ್ದ 46 ಲಿಂಗಾಯತರಲ್ಲಿ 37 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿಯಲ್ಲಿ 51 ಜನರಿಗೆ ಕೊಟ್ಟರೂ, ಗೆದ್ದಿದ್ದು 17 ಜನರು ಮಾತ್ರ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 5, ಬಿಜೆಪಿಯಲ್ಲಿ 9 ಜನರಿಗೆ ಟಿಕೆಟ್‌ ನೀಡಲಾಗಿದೆ ಎಂದು ತಿಳಿಸಿದರು.

ನನ್ನ ಮನಸ್ಸಿಗೆ ನೋವಾಗಿದೆ. ಹಾಗಂತ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲ್ಲ. ಈಗ ಟಿಕೆಟ್‌ ನೀಡಿದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕುಟುಂಬಸ್ಥರಿಗೆ ಟಿಕೆಟ್‌ ನೀಡಿದ್ದು, ಇದು ಎಲ್ಲಿಯವರೆಗೂ ಅಂತ್ಯವಾಗುವುದಿಲ್ಲವೋ ಅಲ್ಲಿಯವರೆಗೆ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ತಪ್ಪಿದ್ದಲ್ಲ. ಗ್ಯಾರಂಟಿ ಯೋಜನೆಗಳಿಂದ ಸದ್ಯ ಕಾಂಗ್ರೆಸ್‌ ಪರ ಅಲೆ ಇದೆ ಎಂದು ಪ್ರತಿಪಾದಿಸಿದರು.

ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡರ, ಲಿಂಗಾಯತ ಮುಖಂಡರಾದ ಮುತ್ತಣ್ಣ ಉಪ್ಪಿನ ಇದ್ದರು. ನಾನು ಯಾವ ಪಕ್ಷದ ಪರವೂ ಇಲ್ಲ: ಚಿಕ್ಕನಗೌಡ್ರ

ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರ ಮಾತನಾಡಿ, ‘ನಾನು ಕಾಂಗ್ರೆಸ್ಸಾಗಲಿ, ಬಿಜೆಪಿಯಾಗಲಿ, ಜೆಡಿಎಸ್‌ ಆಗಲಿ ಯಾವುದೇ ಪಕ್ಷದ ಜತೆ ಗುರುತಿಸಿಕೊಂಡಿಲ್ಲ. ಯಾವ ಪಕ್ಷ ಬೆಂಬಲಿಸಬೇಕೆಂಬುದನ್ನು ಸದ್ಯ ಹೇಳುವುದಿಲ್ಲ. ಕಾದು ನೋಡಿ. ಕಳೆದ ಬಾರಿಯಂತೆ ಈ ಸಲವೂ ನನ್ನ ವೋಟ್‌ ಮಾತ್ರ ಹಾಕುತ್ತೇನೆ ಎಂದರು. ಲಿಂಗಾಯತ ಪ್ರತಿನಿಧಿಗಳನ್ನು ಪಕ್ಷಗಳು ಕಡೆಗಣಿಸುತ್ತಿವೆ. ಅದರಲ್ಲಿ ನಾನು ಹಾಗೂ ಮೋಹನ ಲಿಂಬಿಕಾಯಿ ಒಬ್ಬರು. ಆದ್ದರಿಂದ ಪತ್ರಿಕಾಗೋಷ್ಠಿಗೆ ಬರಲು ತಿಳಿಸಿದ್ದರಿಂದ ನಾನು ಬಂದೆ. ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ. ಲೋಕಸಭಾ ಚುನಾವಣೆ ಬಳಿಕ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದರು.