ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಲು ಅಭಿಯಾನ

| Published : May 31 2024, 02:16 AM IST

ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಲು ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ, ಲಕ್ಷಾಂತರ ಹಣ ಹಾಳು ಮಾಡಬೇಡಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿದರೆ ಊಟ, ಸಮವಸ್ತ್ರ, ಪುಸ್ತಕ ಸಿಗುತ್ತದೆ

ಎಸ್.ಜಿ. ತೆಗ್ಗಿನಮನಿ ನರಗುಂದ

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪರಿಸರ ಪ್ರೇಮಿ ಜಗದೀಶ ಗೊಂಡಬಾಳ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

ಪಟ್ಟಣದ ಹಾಲಭಾವಿ ಕೆರೆ ದಂಡಿಯ ನಿವಾಸಿ ಜಗದೀಶ ಗೊಂಡಬಾಳ ಪ್ರತಿ ದಿನ ಕೂಲಿ-ನಾಲಿ ಮಾಡಿ ಕುಟುಂಬದ ಬಂಡಿ ಸಾಗಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಯಾವುದೇ ಆಸೆ, ಸ್ವಾರ್ಥ ಇಲ್ಲದೇ ಪಟ್ಟಣದ ಶಾಲೆ ಮತ್ತು ದೇವಸ್ಥಾನದ ಆವರಣ, ಚರಂಡಿ, ಶೌಚಾಲಯ ಸ್ವಚ್ಛ ಮಾಡುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಜಗದೀಶ ಅವರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪಾಲಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದಾರೆ. ಪ್ರತಿ ಮನೆಗೆ ಹೋಗಿ ಪಾಲಕರಿಗೆ ತಿಳಿವಳಿಕೆ ಹೇಳುತ್ತಿದ್ದಾರೆ. ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ, ಲಕ್ಷಾಂತರ ಹಣ ಹಾಳು ಮಾಡಬೇಡಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿದರೆ ಊಟ, ಸಮವಸ್ತ್ರ, ಪುಸ್ತಕ ಸಿಗುತ್ತದೆ. ಪ್ರವಾಸ ಆಯೋಜಿಸಲಾಗುತ್ತದೆ. ಸರ್ಕಾರ ಶಿಕ್ಷಣಕ್ಕಾಗಿ ಪ್ರತಿವರ್ಷ ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಹೀಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡುವ ಕರಪತ್ರ ಹಿಡಿದು ಓಡಾಡುತ್ತಿದ್ದಾರೆ. ಮೇ 29ರಿಂದ ಅಭಿಯಾನ ಆರಂಭಿಸಿದ್ದು, ಜೂ. 15ರ ವರೆಗೆ ನಡೆಸುವುದಾಗಿ ಹೇಳಿದ್ದಾರೆ. ಪ್ರತಿ ದಿನ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸುತ್ತಾರೆ.

ಜಗದೀಶ ಅವರು ಗಣೇಶ ಹಬ್ಬದಲ್ಲಿ ಪರಿಸರಸ್ನೇಹಿ ಮೂರ್ತಿ ಮತ್ತು ಹಬ್ಬದ ಆಚರಣೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ವಿದ್ಯಾರ್ಥಿಗಳಿಗೆ ಪರಿಸರ ತಿಳಿವಳಿಕೆ ನೀಡುತ್ತಾರೆ. ಹೋಳಿ ಹಬ್ಬದಲ್ಲಿ ರಾಸಾಯನಿಕ ಬಣ್ಣ ಬಳಕೆ ಮಾಡದಂತೆ ತಿಳಿವಳಿಕೆ ಹೇಳುತ್ತಾರೆ. 10 ವರ್ಷಗಳಿಂದ ಅವರು ಜನಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.

ಸರ್ಕಾರವೊಂದೇ ಎಲ್ಲ ರೀತಿ ಜಾಗೃತಿ ಮೂಡಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನಾನು ಸ್ವ ಇಚ್ಛೆಯಿಂದ ಪ್ರತಿ ಮನೆ ಮನೆಗೆ ಹೋಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಪರಿಸರ ಪ್ರೇಮಿ ಜಗದೀಶ ಗೊಂಡಬಾಳ ಹೇಳಿದರು.