ಆಸ್ತಿಗಳಿಗೆ ಇ-ಖಾತಾ ಪಡೆಯುವ ಬಗ್ಗೆ ಅಭಿಯಾನ ನಡೆಸಿ

| Published : Feb 21 2025, 11:46 PM IST

ಸಾರಾಂಶ

ಇ-ಖಾತೆ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಜಾಗೃತಿ ಮೂಡಿಸಬೇಕು

ಯಲ್ಲಾಪುರ: ಇ-ಖಾತಾ ನೀಡಲು ಬಾಕಿ ಉಳಿದ ಆಸ್ತಿಗಳನ್ನು ಅಭಿಯಾನದ ಮೂಲಕ ಗುರುತಿಸಿ ಆಸ್ತಿಗಳ ಮಾಲಕರು ಇ-ಖಾತೆ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಜಾಗೃತಿ ಮೂಡಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ಪಟ್ಟಣದ ಪಪಂ ಸಭಾಭವನದಲ್ಲಿ ಫೆ.೨೧ರಂದು ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಕುರಿತು ಹಮ್ಮಿಕೊಳ್ಳಲಾದ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಧಿಕಾರಿಗಳ ಜನಪ್ರತಿನಿಧಿಗಳ ಸಭೆ ನಡೆಸಿ, ಮಾತನಾಡುತ್ತಿದ್ದರು.

ಪಪಂ ವ್ಯಾಪ್ತಿಯ ನಾರಾಯಣಪುರ, ಸವಣಗೇರಿ, ಸಹಸ್ರಳ್ಳಿ, ಕಾಳಮ್ಮನಗರ ಪ್ರದೇಶದ ಅನಧಿಕೃತ ನಿವೇಶನಗಳನ್ನು ಗುರುತಿಸಿ, ಗಾಂವಠಾಣಾ ಜಾಗ ತಕ್ಷಣ ಗುರುತಿಸುವ ಕೆಲಸ ತಹಶೀಲ್ದಾರ, ಪಪಂ ಅಧಿಕಾರಿಗಳು ಮಾಡುವಂತೆ ಸೂಚನೆ ನೀಡಿದರು.

ಎ.ಖಾತಾ ಹೆಸರಿನಲ್ಲಿ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಬಿ-ಖಾತಾ ಹೆಸರಿನಲ್ಲಿ ಲೇಔಟ್ ಅಕ್ರಮವನ್ನು ಸಕ್ರಮಗೊಳಿಸಲು ಸರ್ಕಾರ ಇದೊಂದು ಅವಕಾಶ ಮಾಡಿಕೊಟ್ಟಿದೆ. ಕಸದ ಗಾಡಿಗೂ ಟ್ಯಾಕ್ಸ್ ತುಂಬಲು ಹೇಳುವ ಜೊತೆಗೆ ಇ ಖಾತಾ, ಬಿ ಖಾತಾ ಅಭಿಯಾನದ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕು. ಕರಪತ್ರ ಹಂಚಿ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಿ, ಜನರಿಗೆ ಗೊಂದಲವಿಲ್ಲದೇ ನ್ಯಾಯ ಸಿಗುವಂತೆ ಮಾಡಬೇಕು ಎಂದರು.

ಪಪಂ ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಪಪಂ ಸದಸ್ಯರು, ಮುಖ್ಯಾಧಿಕಾರಿ ಸುನಿಲ್ ಗಾವಡೆ, ಗ್ರೇಡ್ ೨ ತಹಶೀಲ್ದಾರ ಸಿ.ಜಿ. ನಾಯ್ಕ, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಹೆಬ್ಬಾರ, ರಾಜ್ಯ ಸರ್ಕಾರದ ಇ ಆಸ್ತಿ ತಂತ್ರಾಂಶದ ಮೂಲಕ ಇದ್ದವರಿಗೆ ಬಿ ಖಾತಾ ಕೊಡುವ ಐತಿಹಾಸಿಕ ನಿರ್ಣಯ ಸ್ವಾಗತಾರ್ಹ. ಇದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಸಾಲ ಖಾತೆ ವಿಂಗಡಣೆ, ವಿದ್ಯುತ್ ಸೌಲಭ್ಯ ಇತ್ಯಾದಿ ಪಡೆಯಲು ಅನುಕೂಲ ಆಗಲಿದೆ. ರಾಜ್ಯದಲ್ಲಿ ೩೦ ಲಕ್ಷ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ. ಯಲ್ಲಾಪುರ ಕ್ಷೇತ್ರದಲ್ಲಿ ೪ ಸಾವಿರ ಕುಟುಂಬಗಳಿಗೆ ನ್ಯಾಯ ಸಿಗಲಿದೆ ಎಂದರು.

ನಿಗದಿತ ಅವಧಿಯಲ್ಲಿ ಕೆಲಸ ಆಗಬೇಕು. ಅರ್ಜಿ ಕೊಟ್ಟವರಿಗೆ ೩ ತಿಂಗಳೊಳಗೆ ಶಾಶ್ವತ ಪರಿಹಾರ ದೊರೆಯಬೇಕು. ನಂತರ ಬಿ ಖಾತಾದಲ್ಲಿ ಒಳಬರಲು ಅವಕಾಶವಿಲ್ಲ. ಸರ್ಕಾರಿ ಆಸ್ತಿ ಹೊರತುಪಡಿಸಿ, ಗಾಂವಠಾಣಾ ಸೇರಿದಂತೆ ಎಲ್ಲ ಅನಧಿಕೃತ ಆಸ್ತಿಗಳಿಗೆ ನಗರದಲ್ಲಿ ವಾಸವಾಗಿರುವರಿಗೆ ಅನುಕೂಲ ಆಗಲಿದೆ. ಪ್ರತಿ ೧೫ ದಿನಕ್ಕೆ ಈ ಕುರಿತು ಪ್ರಗತಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಪಾರದರ್ಶಕ ಆಡಳಿತ ಬರಬೇಕು ಎಂದರು.