ಕ್ಯಾಂಪ್ಕೊ ಆಡಳಿತ ಮಂಡಳಿಗೆ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಚುನಾವಣೆ ನಡೆಯಿತು. ಒಟ್ಟು 5,576 ಸದಸ್ಯ ಮತದಾರರು ಇದ್ದು, 2,573 ಮಂದಿ ಮತ ಚಲಾಯಿಸಿದ್ದು, ಶೇ. 45.53ರಷ್ಟು ಮತದಾನವಾಗಿದೆ.

ಮಂಗಳೂರು: ಕರ್ನಾಟಕ ಹಾಗೂ ಕೇರಳದ ಪ್ರತಿಷ್ಠಿತ ಅಂತಾರಾಜ್ಯ ಸಹಕಾರ ಸಂಸ್ಥೆಯಾದ ಕೇಂದ್ರ ಅಡಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ) ಆಡಳಿತ ಮಂಡಳಿಗೆ ಭಾನುವಾರ ಮಂಗಳೂರಲ್ಲಿ ಚುನಾವಣೆ ನಡೆಯಿತು. ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ ಆರು ಸ್ಥಾನಗಳಿಗೆ ಎಂಟು ಮಂದಿ ಕಣದಲ್ಲಿದ್ದರು. ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಚುನಾವಣೆ ನಡೆಯಿತು. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಚುನಾವಣೆ ನಡೆಯಿತು. ಒಟ್ಟು 5,576 ಸದಸ್ಯ ಮತದಾರರು ಇದ್ದು, 2,573 ಮಂದಿ ಮತ ಚಲಾಯಿಸಿದ್ದು, ಶೇ. 45.53ರಷ್ಟು ಮತದಾನವಾಗಿದೆ. ಮತಗಳ ಎಣಿಕೆ ನ. 25 ರಂದು ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ನ. 28 ರಂದು ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಲಿದೆ. ಮತ ಎಣಿಕೆ ಬಳಿಕ ವಿಜೇತರ ಹೆಸರನ್ನು ದೆಹಲಿಯ ಸಹಕಾರ ಇಲಾಖೆಗೆ ಕಳುಹಿಸಿ, ಅಲ್ಲಿಂದ ಅನುಮೋದನೆಗೊಂಡು ಪ್ರಕಟಗೊಳ್ಳಬೇಕಾಗಿದೆ.

ಕರ್ನಾಟಕ ಮತ್ತು ಕೇರಳದ ಅಡಕೆ ಮತ್ತು ಕೊಕ್ಕೊ ಬೆಳೆಗಾರರ ಸಂಘಟನೆಯಾಗಿರುವ ಕ್ಯಾಂಪ್ಕೊಗೆ 15 ವರ್ಷಗಳ ನಂತರ ಮತ್ತೆ ಚುನಾವಣೆ ನಡೆದಿದೆ. 2010ರಲ್ಲಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಂತರದ ಎರಡು ಅವಧಿಗೆ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು.

ಪ್ರಸ್ತುತ ಕೇರಳದ ಎಲ್ಲ ಒಂಬತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಕೇರಳದಿಂದ ಸಹಕಾರ ಭಾರತಿ ಬೆಂಬಲಿತ ಪದ್ಮರಾಜ ಪಟ್ಟಾಜೆ, ವೆಂಕಟರಮಣ ಭಟ್, ಸತ್ಯನಾರಾಯಣ ಪ್ರಸಾದ್, ಸತೀಶ್ಚಂದ್ರ ಭಂಡಾರಿ, ಸೌಮ್ಯ ಪ್ರಕಾಶ್, ರಾಧಾಕೃಷ್ಣ, ವಿವೇಕಾನಂದ ಗೌಡ, ಗಣೇಶ್ ಕುಮಾರ್, ಸದಾನಂದ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಒಟ್ಟು 10 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಮಾಲಿನಿ ಪ್ರಸಾದ್, ಗಣೇಶ್, ರಾಘವೇಂದ್ರ ಎಚ್.ಎಂ, ಉತ್ತರ ಕನ್ನಡದ ವಿಶ್ವನಾಥ ಹೆಗಡೆ ಅವಿರೋಧವಾಗಿ ಆಯ್ಕೆಯಾದವರು.ಇನ್ನುಳಿದ ಆರು ಸ್ಥಾನಗಳಿಗೆ ದಯಾನಂದ ಹೆಗ್ಡೆ, ಮಹೇಶ್ ಚೌಟ, ಮುರಳೀಕೃಷ್ಣ ಕೆ.ಎನ್, ಪುರುಷೋತ್ತಮ್ ಭಟ್, ಸತೀಶ್ಚಂದ್ರ ಎಸ್.ಆರ್, ತೀರ್ಥರಾಮ ಎ.ವಿ, ಎಂ.ಜಿ. ಸತ್ಯನಾರಾಯಣ, ರಾಮ್ ಪ್ರತೀಕ್ ಸ್ಪರ್ಧಾ ಕಣದಲ್ಲಿದ್ದರು.

ಎಂ.ಜಿ. ಸತ್ಯನಾರಾಯಣ ಮತ್ತು ರಾಮ್ ಪ್ರತೀಕ್ ಭಾರತೀಯ ಕಿಸಾನ್ ಸಂಘಕ್ಕೆ ಸೇರಿದವರಾದರೆ, ಆರು ಮಂದಿ ಸಹಕಾರ ಭಾರತಿ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಇವೆರಡೂ ಸಂಘಟನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಸಂಸ್ಥೆಗಳಾಗಿವೆ. ಇವೆರಡು ಸಂಘಟನೆಗಳ ಸದಸ್ಯರ ನಡುವೆಯೇ ಕ್ಯಾಂಪ್ಕೋ ಚುನಾವಣೆಯಲ್ಲಿ ಪೈಪೋಟಿ ಏರ್ಪಟ್ಟಿತ್ತು.