ಸಾರಾಂಶ
ಹಳಿಯಾಳ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯು ಸಂಸ್ಥಾಪನೆಯ ಇಪ್ಪತ್ತು ವರ್ಷಗಳ ಕಾಲಾವಧಿಯಲ್ಲಿ ವಿಶಿಷ್ಟ ಕೌಶಲ್ಯ ತರಬೇತಿಗಳು ನೀಡುವ ಮೂಲಕ ಹಾಗೂ ಯುವಕರನ್ನು ಸ್ವಾವಲಂಬಿಯನ್ನಾಗಿಸುವ ಮತ್ತು ಮಹಿಳಾ ಸಬಲೀಕರಣದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ದೇಶದ ಗಮನ ಸೆಳೆದಿದೆ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ಅಧ್ಯಕ್ಷ ಪ್ರಸಾದ ದೇಶಪಾಂಡೆ ತಿಳಿಸಿದರು.
ಸೋಮವಾರ ಪಟ್ಟಣದ ಸಿಬಿಡಿ ಆರ್‌ಸೆಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ 20ನೇ ವಾರ್ಷಿಕ ವರದಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆರ್.ವಿ. ದೇಶಪಾಂಡೆ ಅವರಿಗೆ ಯುವಜನಾಂಗದ ಭವಿಷ್ಯ, ದೇಶದ ಅಭಿವೃದ್ಧಿಯ ಬಗ್ಗೆ ಅವರಲ್ಲಿರುವ ಚಿಂತನೆ ಕಾಳಜಿಯನ್ನು ಈ ಆರ್‌ಸೆಟಿ ಸಂಸ್ಥೆಯೇ ಎತ್ತಿ ತೋರುತ್ತಿದೆ. ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ 78 ಹೊಸ ಸ್ವ- ಸಹಾಯ ಗುಂಪುಗಳನ್ನು ರಚಿಸಿದ್ದು, ಈ ವರೆಗೆ 1450 ಸಕ್ರಿಯ ಸ್ವ ಸಹಾಯ ಗುಂಪುಗಳನ್ನು ರಚಿಸಿ 16500 ಮಹಿಳೆಯರನ್ನು ಸದಸ್ಯರನ್ನಾಗಿ ಮಾಡಿ, ₹69.88 ಕೋಟಿ ಆರ್ಥಿಕ ಸೌಲಭ್ಯವನ್ನು 294 ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳ ಮೂಲಕ ಒದಗಿಸಲಾಗಿದೆ ಎಂದರು.
ಆರ್ಥಿಕ ಸೌಲಭ್ಯ ನೀಡಲು ಬದ್ಧ: ವಾರ್ಷಿಕ ವರದಿ ಬಿಡುಗಡೆ ಮಾಡಿ ಮಾತನಾಡಿದ ಕೆನರಾ ಬ್ಯಾಂಕ್ ಶಿರಸಿ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ಕಿರಣ ಜಗತಾಪ, ಗ್ರಾಮೀಣ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿ ಯೋಜನೆಯನ್ನು ಸಾಕಾರಗೊಳಿಸಲು, ಗ್ರಾಮೀಣ ಭಾಗದ ನಿರುದ್ಯೋಗಿ ಯುವ ಸಮೂಹಕ್ಕೆ ಕೌಶಲ್ಯ ತರಬೇತಿ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡುವ ಮಾದರಿ ಹಾಗೂ ಪವಿತ್ರ ಕಾಯಕದಲ್ಲಿ ತೊಡಗಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ಯಪಡಿಸಿದರು.ಹಳಿಯಾಳ ಅರಣ್ಯ ವಿಭಾಗದ ಎಸಿಎಫ್ ವಿನುತಾ ಚವ್ಹಾಣ ಮಾತನಾಡಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ನಿರ್ದೇಶಕ ಪ್ರಶಾಂತ ಬಡ್ಡಿ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ವಿಆರ್‌ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಜೆಎಸ್‌ಡಬ್ಲ್ಯು ಉದ್ಯಮದ ಪೆದ್ದಣ್ಣ ಬಿಡಾದಾಳ, ಸಂಸ್ಥೆಯ ನಿರ್ದೇಶಕ ಶ್ಯಾಮ್ ಕಾಮತ, ವಾಸುದೇವರಾಯ ದೇಶಪಾಂಡೆ, ಹಿರಿಯ ಮಾರ್ಗದರ್ಶಕ ಅನಂತಯ್ಯ ಆಚಾರ, ಸಂಯೋಜಕ ವಿನಾಯಕ ಚವ್ಹಾಣ, ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿ ಭಾರತಿ ವಸ್ತ್ರದ ಇದ್ದರು.