ಸಾರಾಂಶ
ಗಜೇಂದ್ರಗಡ: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಂಘಟನೆ ನೇತೃತ್ವದಲ್ಲಿ ನೀಟ್ ರದ್ದುಪಡಿಸಿ, ಹಾಸ್ಟೇಲ್ ಪ್ರಾರಂಭಿಸಿ, ಬಸ್ ಸಮಸ್ಯೆ ಹಾಗೂ ವಿವಿಧ ಬೇಡಿಕೆ ಬಗೆಹರಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಶುಕ್ರವಾರ ಕೆ.ಕೆ. ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಎಸ್‌ಎಫ್‌ಐ ಮುಖಂಡ ಗಣೇಶ ರಾಠೋಡ ಮಾತನಾಡಿ,ನೀಟ್ ಪರೀಕ್ಷೆ ರದ್ದುಪಡಿಸಲು ಮತ್ತು ನೀಟ್,ನೆಟ್ ಪರೀಕ್ಷೆಯಲ್ಲಿ ನಡೆದ ಹಗರಣವನ್ನು ನಿಪಕ್ಷಪಾತ ತನಿಖೆಗೆ ಮುಂದಾಗಬೇಕು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ನಿನ್ನೆ ವಿದ್ಯಾರ್ಥಿಗಳ ಮುಷ್ಕರದಲ್ಲಿ ರಾಜ್ಯದ ವಿದ್ಯಾರ್ಥಿಗಳು ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಅದರಂತೆ ಎಸ್‌ಎಫ್‌ಐ ಗಜೇಂದ್ರಗಡ ತಾಲೂಕು ಸಮಿತಿಯು ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಿ ಮನವಿ ಸಲ್ಲಿಸುತ್ತಿದೆ ಎಂದರು.ಕಳೆದ ಕೆಲವು ವಾರಗಳಿಂದ ನಡೆದ ಘಟನೆಗಳನ್ನು ಗಮನಿಸಿದಾಗ ಮತ್ತೊಮ್ಮೆ ರಾಷ್ಟೀಯ ಪರೀಕ್ಷಾ ಪ್ರಾಧಿಕಾರ ರಾಷ್ಟ್ರ ಮಟ್ಟದ ಪರೀಕ್ಷೆಗಳನ್ನು ನಡೆಸಲು ಅಸಮರ್ಥತೆ ಪ್ರದರ್ಶಿಸಿದೆ. ನೆಟ್ ಮರು ಪರೀಕ್ಷೆ, ನೀಟ್ ಪರೀಕ್ಷೆಯ ಪ್ರೆಶ್ನೆಪತ್ರಿಕೆ ಸೋರಿಕೆ ರಾಷ್ಟ್ರಾದ್ಯಂತ ಸುದ್ದಿ ಮಾಡಿದೆ. ಜೂ.೪ ರಂದು ಘೋಷಿಸಲಾದ ನೀಟ್ ಪರೀಕ್ಷೆಯ ಫಲಿತಾಂಶಗಳು ಸರಿಯಾದ ಪಾರದರ್ಶಕತೆ ಇಲ್ಲದೆ ಮತ್ತು ಪೇಪರ್ ಸೋರಿಕೆಯಂತಹ ದೂರುಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಭಾದಿತರಾಗಿದ್ದಾರೆ ಎಂದರು.
ಲಕ್ಷಗಟ್ಟಲೆ ವಿದ್ಯಾರ್ಥಿಗಳು ಹಾಜರಾಗಿದ್ದ ಯುಜಿಸಿ ನೆಟ್ ಪರೀಕ್ಷೆಯು ಪೇಪರ್ ಸೋರಿಕೆ ವರದಿಗಳಿಂದ ರದ್ದುಗೊಳಿಸಲಾಯಿತು. ಇದಲ್ಲದೆ, ನೇರವಾಗಿ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿ.ಇ) ಸಹ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಬಗ್ಗೆ ಉಲ್ಲೇಖಿಸಿ ಎನ್‌ಇಟಿ ಮರು ಪ್ರವೇಶ ಪರೀಕ್ಷೆಗಳನ್ನು ಕೊನೆಯ ಕ್ಷಣದಲ್ಲಿ ಮುಂದೂಡಲು ನಿರ್ಧರಿಸಲಾಗಿದೆ. ಕೋಚಿಂಗ್ ಸೆಂಟರ್ ಗಳ ಪ್ರೋತ್ಸಾಹಿಸುವಿಕೆ ಸಿಯುಇಟಿ, ನೀಟ್ ನಂತಹ ಕೇಂದ್ರೀಕೃತ ಪರೀಕ್ಷೆಗಳ ಪಾಲಿಸಿಗಳಿಂದ ಶಿಕ್ಷಣದ ಖಾಸಗೀಕರಣ ಹೆಚ್ಚುತ್ತಿದೆ. ಇದರಿಂದ ಕೋಟ್ಯಂತರ ತಳ ಸಮುದಾಯದ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದುಬಾರಿಯಾಗಿದೆ ಎಂದು ದೂರಿದರು.ಒಂದು ರಾಷ್ಟ್ರ, ಒಂದು ಪರೀಕ್ಷೆ ಎಂಬ ಘೋಷಣೆಯಡಿಯಲ್ಲಿ,ಇಡೀ ಪರೀಕ್ಷಾ ವ್ಯವಸ್ಥೆಯು ಕುಸಿದಿದೆ ಮತ್ತು ಅನಿರ್ದಿಷ್ಟಾವಧಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಪಾಯಕ್ಕೆ ಸಿಲುಕಿಸಿದೆ. ಹೋರಾಟದ ಸ್ಥಳಕ್ಕೆ ತಹಸೀಲ್ದಾರರ ಭೇಟಿ ನೀಡಿ ಮನವಿ ಸ್ವೀಕರಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸುತ್ತೇವೆ ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಎಲ್ಲ ಇಲಾಖೆಯ ಅಧಿಕಾರಿಗಳನ್ನು ಮತ್ತು ಡಿಪೋ ಮ್ಯಾನೇಜರ್ ಅವರನ್ನು ಒಳಗೊಂಡು ಸಭೆ ಕರೆದು ವಿದ್ಯಾರ್ಥಿ ಮುಖಂಡರ ಜತೆ ಸಭೆ ಮಾಡಿ ಬಗೆಹರಿಸಲು ತಕ್ಷಣವೇ ಸಭೆ ಕರೆಯುತ್ತೇವೆ ಎಂದು ಭರವಸೆ ನೀಡಿದರು.
ಮುಖಂಡರಾದ ಶರಣು ಎಂ, ಮಹಾಂತೇಶ, ಬಸವರಾಜ, ಅನೀಲ್, ವಿಜಯಕುಮಾರ್, ಬಸು ಪಾಟೀಲ್, ಅಕ್ಷತಾ, ಬಾನು, ಉಮೇಶ, ದ್ಯಾಮಣ್ಣ, ಕಿರಣ ರಾಠೋಡ ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.