ಸಾರಾಂಶ
ಪುರಸಭೆ ಸದಸ್ಯರು ಹಾಗೂ ಪುರಸಭೆ ನಿರ್ಲಕ್ಷ್ಯಕ್ಕೆ ಪಟ್ಟಣದ ಹಿಮವದ್ ಗೋಪಾಲಸ್ವಾಮಿ ಬಡಾವಣೆಯಲ್ಲಿ ಗಿಡ ಗಂಟಿಗಳು ಬೆಳೆದು ನಿಂತು ಸ್ವಚ್ಛತೆ ಇಲ್ಲದೆ ನಾರುತ್ತಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪುರಸಭೆ ಸದಸ್ಯರು ಹಾಗೂ ಪುರಸಭೆ ನಿರ್ಲಕ್ಷ್ಯಕ್ಕೆ ಪಟ್ಟಣದ ಹಿಮವದ್ ಗೋಪಾಲಸ್ವಾಮಿ ಬಡಾವಣೆಯಲ್ಲಿ ಗಿಡ ಗಂಟಿಗಳು ಬೆಳೆದು ನಿಂತು ಸ್ವಚ್ಛತೆ ಇಲ್ಲದೆ ನಾರುತ್ತಿದೆ.ಮಳೆಗಾಲ ಆರಂಭವಾದ ಬಳಿಕ ಬಡಾವಣೆಯ ಪ್ರಮುಖ ರಸ್ತೆ ಬದಿ ಚರಂಡಿಯಲ್ಲಿ ಕಸ ತೆಗೆದಿಲ್ಲ. ಅಲ್ಲದೆ ಚರಂಡಿ ಸುತ್ತಲೂ ಹಾಗೂ ರಸ್ತೆಯಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿದ್ದು,ಸೊಳ್ಳೆಗಳಿಗೆ ಆಶ್ರಯ ತಾಣವಾಗಿವೆ. ಗಿಡ ಗಂಟಿಗಳು ಬೆಳೆದು ನಿಂತ ಕಾರಣ ಹಾವುಗಳು ಬರುತ್ತಿವೆ. ಅಲ್ಲದೆ ಇದೀಗ ಡೆಂಘೀ ಜ್ವರ ರಾಜ್ಯದಲ್ಲಿ ಕಾಣಿಸಿಕೊಂಡ ಈ ಸಮಯದಲ್ಲಿ ಬಡಾವಣೆಯಲ್ಲಿ ಸ್ವಚ್ಛತೆ ಇಲ್ಲದೆ ಇರುವುದು ನಾಗರೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಖಾಲಿ ನಿವೇಶನದಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿದ್ದು, ಖಾಲಿ ನಿವೇಶನ ಸ್ವಚ್ಛ ಗೊಳಿಸುವಂತೆ ಪುರಸಭೆ ನಿವೇಶನ ಮಾಲೀಕರಿಗೆ ಎಚ್ಚರಿಕೆ ನೀಡಿಲ್ಲ ಎಂದು ಬಡಾವಣೆಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.ಜನರ ಆಕ್ರೋಶ: ವಾರ್ಡ್‌ನ ಪುರಸಭೆ ಸದಸ್ಯರೊಬ್ಬರು ಚುನಾವಣೆ ಸಮಯದಲ್ಲಿ ಬಂದಿದ್ದು ಬಿಟ್ಟರೆ ಮತ್ತೆ ಈ ವಾರ್ಡ್‌ನತ್ತ ತಿರುಗಿಯೂ ನೋಡಿಲ್ಲ ಎಂದು ಬಡಾವಣೆಯ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಪುರಸಭೆ ಸದಸ್ಯರು ನಿವಾಸಿಗಳ ಫೋನ್ ಕೂಡ ರಿಸೀವ್ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪುರಸಭೆ ಸದಸ್ಯರ ನಿರ್ಲಕ್ಷ್ಯದ ಜೊತೆಗೆ ಪುರಸಭೆ ಅಧಿಕಾರಿಗಳು ನಮ್ಮ ಬಡಾವಣೆಯತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಇದೀಗ ಡೆಂಘೀ ಜ್ವರ ರಾಜ್ಯದಲ್ಲಿ ಭಯ ಹುಟ್ಟಿಸಿದೆ. ಈಗಲಾದರೂ ಪುರಸಭೆ ಸ್ವಚ್ಛತೆಗೆ ಮುಂದಾಗುವುದೇ ಕಾದು ನೋಡಬೇಕಿದೆ.-ಮಹದೇವಶೆಟ್ಟಿ, ಗುಂಡ್ಲುಪೇಟೆ ನಿವಾಸಿ
ಹಿಮವದ್ ಗೋಪಾಲಸ್ವಾಮಿ ಬಡಾವಣೆಯಲ್ಲಿ ಸ್ವಚ್ಛತೆ ಮಾಡಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಹೇಳಿದ್ದೇನೆ. ಕ್ಲೀನ್ ಮಾಡಲು ಜನರಿಲ್ಲ ಎಂದು ಹೇಳುತ್ತಿದ್ದಾರೆ. ಬಡಾವಣೆಯ ಜನರು ಫೋನ್ ಮಾಡುತ್ತಿದ್ದಾರೆ ಈ ಬಗ್ಗೆ ಸ್ವಚ್ಛ ಮಾಡುವಂತೆ ಮತ್ತೇ ಹೇಳುವೆ-ವೀಣಾ ಮಂಜುನಾಥ್, ಪುರಸಭೆ ಸದಸ್ಯೆ