- ಮುಖಂಡ ಮಹೇಶಪ್ಪ ಆಗ್ರಹ । ಅಂಬೇಡ್ಕರ್‌, ಸೇವಾಲಾಲ್‌ ಫೋಟೋಗಳಿಟ್ಟು ಪ್ರತಿಭಟನೆ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಇಲ್ಲಿಗೆ ಸಮೀಪದ ಕೊಮಾರನಹಳ್ಳಿ ಗ್ರಾಮದ ಗೋಮಾಳದಲ್ಲಿ ಮಲೇಬೆನ್ನೂರು ಪುರಸಭೆಗೆ ಮಂಜೂರಾದ ಘನತ್ಯಾಜ್ಯ ಘಟಕವನ್ನು ರದ್ದು ಮಾಡಲು ಆಗ್ರಹಿಸಿ ಸ್ಥಳೀಯ ಮಹಿಳೆಯರೊಂದಿಗೆ ಗ್ರಾಮಸ್ಥರು ಡಾ.ಅಂಬೇಡ್ಕರ್ ಮತ್ತು ಸಂತ ಸೇವಾಲಾಲ್ ಭಾವಚಿತ್ರವಿಟ್ಟು ಶುಕ್ರವಾರ ಉರಿ ಬಿಸಿಲಲ್ಲೂ ಪ್ರತಿಭಟನೆ ನಡೆಸಿದರು.

ಮುಖಂಡ ಮಹೇಶಪ್ಪ ಮಾತನಾಡಿ, ಕೊಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ ೫೯ರಲ್ಲಿ ೨.೨೦ ಎಕರೆ ಜಮೀನನ್ನು ಜಿಲ್ಲಾಧಿಕಾರಿ ಪುರಸಭೆಯ ಘನತ್ಯಾಜ್ಯ ಘಟಕಕ್ಕೆ ಮಂಜೂರು ಮಾಡಿದ್ದಾರೆ. ಇದರ ಸಮೀಪದಲ್ಲಿಯೇ ಆಂಜನೇಯ ಸ್ವಾಮಿ ದೇವಾಲಯವಿದೆ. ವರ್ಷಕ್ಕೊಮ್ಮೆ ಜಾತ್ರೆ, ಅನ್ನಪ್ರಸಾದವೂ ನಡೆಯುತ್ತದೆ. ಆದರೆ, ಸದರಿ ಘನತ್ಯಾಜ್ಯ ಘಟಕ ನಿರ್ಮಾಣದಿಂದ ದುರ್ವಾಸನೆ ಉಂಟಾಗಿ ದೇವಾಲಯ ಸುತ್ತಲ ವಾತಾವರಣ ಕಲುಷಿತಗೊಳ್ಳಲಿದೆ. ಅಲ್ಲದೇ, ಭಕ್ತರ ಪ್ರವೇಶಕ್ಕೂ ಕುಂದುಂಟಾಗಲಿದೆ ಎಂದರು.


ಹಸಿ ತ್ಯಾಜ್ಯದಿಂದ ಅಂತರ್ಜಲ ಗುಣಮಟ್ಟವೂ ಹಾಳಾಗಲಿದೆ ಎಂದು ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗ ವರದಿ ನೀಡಿದೆ. ನಿವೇಶನರಹಿತರು ೨೦ ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ನೀಡಿದ್ದಾರೆ. ಹಾಗಾಗಿ, ತ್ಯಾಜ್ಯ ಘಟಕಕ್ಕೆ ಮಂಜೂರಾದ ಜಮೀನನ್ನು ರದ್ದುಪಡಿಸಲು ಆಗ್ರಹಿಸಿದರು.

ಈ ಹಿಂದಿನ ಜಿಲ್ಲಾಧಿಕಾರಿ ಗೋಮಾಳದಲ್ಲಿ ದನ, ಕುರಿಗಳ ಮಾತ್ರ ಮೇಯಿಸಬೇಕು ಎಂದು ಹೇಳಿದ್ದರು. ಆದರೆ, ಈಗ ತ್ಯಾಜ್ಯ ಘಟಕಕ್ಕೆ ಗೋಮಾಳ ಜಾಗ ಮಂಜೂರು ಮಾಡಿದ್ದಾರೆ. ಇಂಥ ನಡೆ ಏಕೆ? ಪ್ರತಿ ಜಿಲ್ಲಾಧಿಕಾರಿಗಳಿಗೂ ಬೇರೆ ಬೇರೆ ಕಾನೂನು ಇದೆಯಾ ಎಂದು ಪ್ರಶ್ನಿಸಿದರು.

ಸ್ಥಳಕ್ಕೆ ಉಪ ತಹಸೀಲ್ದಾರ್ ರವಿ ಆಗಮಿಸಿ ಪ್ರತಿಭಟನಾಕಾರರ ಜತೆ ಚರ್ಚಿಸಿದರು. ಒಟ್ಟು ೧೦೭ ಎಕರೆಯಲ್ಲಿ ೨.೨೦ ಎಕರೆ ಮಾತ್ರ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಮಂಜೂರು ಮಾಡಿದಾರೆ. ನಿಮ್ಮ ಬೇಡಿಕೆಗಳ ಸಲ್ಲಿಸಿದಲ್ಲಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಅವರಿಗೆ ತಲುಪಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆ ಬಳಿಕ ಮನವಿ ಸಲ್ಲಿಸಿದ ವೇಳೆ ಅಣ್ಣಪ್ಪ, ಶಾಂತಿಬಾಯಿ, ಕಮಲಿಬಾಯಿ, ಪವಿತ್ರಬಾಯಿ, ನೇತ್ರಾಬಾಯಿ, ಸವಿತಾಬಾಯಿ, ಪಾರಿಬಾಯಿ, ರಂಗನಾಥ, ರವಿ, ಸರೋಜಾಬಾಯಿ, ಮಂಜಾನಾಯ್ಕ್, ರೋಜಾಬಾಯಿ ಮತ್ತಿತರರು ಇದ್ದರು.

ಪ್ರತಿಭಟನಾ ಸ್ಥಳದಲ್ಲಿ ಪುರಸಭೆ ಮುಖ್ಯಾಧಿಕಾರಿ ಗೈರಾಗಿದ್ದರು. ಪರಿಸರ ಎಂಜಿನಿಯರ್ ಉಮೇಶ್ ಇದ್ದರು. ಪಿಎಸ್‌ಐ ಹಾರೂನ್ ಅಕ್ತರ್, ಶ್ರೀಪತಿ ಗಿನ್ನಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

- - -

-ಚಿತ್ರ೨:

ಕೊಮಾರನಹಳ್ಳಿ ಗೋಮಾಳದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಾಗ ನೀಡಿರುವುದನ್ನು ರದ್ದುಪಡಿಸಲು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.