ಸಾರಾಂಶ
ಕನ್ನಡಪ್ರಭ ಸರಣಿ ವರದಿ ಭಾಗ : 120
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಅಪಾಯಕಾರಿ ಕೆಮಿಕಲ್- ತ್ಯಾಜ್ಯ ಕಂಪನಿಗಳ ವಿರೋಧಿಸಿ, ಆ ಭಾಗದ ನಾಲ್ಕು ಗ್ರಾಪಂಗಳು ಸಾಮಾನ್ಯ ಸಭೆಯಲ್ಲಿ ಹೊರಡಿಸಿರುವ ಒಮ್ಮತದ ಠರಾವು ಕುರಿತು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿರುವ ಯಾದಗಿರಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ಸರ್ಕಾರದ ನಿರ್ದೇಶನ ಅನುಸಾರ ಕಂಪನಿಗಳು ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಾಂತ್ರಿಕ ಸಮಿತಿ ನೀಡುವ ನಿರ್ದೇಶನ ಅನುಸಾರ ಕಂಪನಿಗಳನ್ನು ಪ್ರಾರಂಭಿಸಲಾಗಿದೆಯೇ ಎಂಬುವುದನ್ನು ಪರಿಶೀಲಿಸಿ, ನಿರ್ಲಕ್ಷ್ಯ ವಹಿಸಿದ್ದಲ್ಲಿ, ಸಂಬಂಧಪಟ್ಟ ಕಂಪನಿಗಳ ಪರವಾನಗಿ ರದ್ದುಪಡಿಸುವಂತೆ ತಿಳಿಸಿದ್ದಾರೆ.ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಸೂಸುತ್ತಿರುವ ವಿಷಾನಿಲ ಹಾಗೂ ದುರ್ನಾತದಿಂದಾಗಿ ಆ ಭಾಗದ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ಮೇಲೆ, ಪರಿಸರ ಹಾಗೂ ಜೀವ-ಜಲಚರಗಳ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇಂತಹ ಕಾರ್ಖಾನೆಗಳ ಪರಿಸರ ಅನುಮತಿಯನ್ನು ರದ್ದುಗೊಳಿಸಿ, ಈ ಅಪಾಯಕಾರಿ ಕಾರ್ಖಾನೆಗಳ ಬಂದ್ ಮಾಡುವಂತೆ ಸಾಮಾನ್ಯ ಸಭೆಯಲ್ಲಿ ಇದೇ ಮೇ 27 ರಂದು ಕಿಲ್ಲನಕೇರಾ ಗ್ರಾಪಂ, ಮೇ 29 ರಂದು ಕಡೇಚೂರು ಗ್ರಾಪಂ, ಜೂ. 16 ರಂದು ಸೈದಾಪುರ ಗ್ರಾಪಂ ಹಾಗೂ ಜೂ.17 ರಂದು ಬಾಡಿಯಾಳ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದಿಂದ ಠರಾವು ಪಾಸು ಮಾಡಿ, ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಂದ ಈ ಪ್ರಸ್ತಾವನೆಯು, ಮುಂದಿನ ಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕರ ಮೂಲಕ ತಮ್ಮ ಕಚೇರಿಗೆ (ಸಿಇಓ) ವರದಿ ಸಲ್ಲಿಸಿದ್ದಾರೆ. ಪ್ರಯುಕ್ತ, ಗ್ರಾಪಂಗಳ ಸಾಮಾನ್ಯ ಸಭೆಯಲ್ಲಿನ ಠರಾವು ನಡಾವಳಿಯನ್ನು ಪರಿಶೀಲಿಸಲಾಗಿ ಹಾಗೂ ಈ ಕುರಿತು ಕನ್ನಡಪ್ರಭ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸರಣಿ ವರದಿಗಳ ಗಮನಿಸಲಾಗಿದೆ. ಗ್ರಾಪಂ ನಡಾವಳಿಗಳನ್ನು ಹಾಗೂ ಕನ್ನಡಪ್ರಭ ದಿನಪತ್ರಿಕೆಯ ವರದಿಗಳನ್ನು ಲಗತ್ತಿಸಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಸಿಇಓ ಲವೀಶ ಒರಡಿಯಾ, ನಿರ್ಲಕ್ಷ್ಯ ವಹಿಸಿದ್ದಲ್ಲಿ, ಸಂಬಂಧಪಟ್ಟ ಕಂಪನಿಗಳ ಪರವಾನಗಿ ರದ್ದುಪಡಿಸುವಂತೆ ತಿಳಿಸಿದ್ದಾರೆ."ಕಡೇಚೂರು : ಬದುಕು ಚೂರು..! ಚೂರು..!! " ಶೀರ್ಷಿಕೆಯಡಿ ಏ.9 ರಿಂದ ಕನ್ನಡಪ್ರಭದಲ್ಲಿ ಈವರೆಗೆ ಪ್ರಕಟಗೊಂಡ ಸರಣಿ ವರದಿಗಳಲ್ಲಿನ ಅನೇಕ ಅಂಶಗಳನ್ನೂ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿರುವ ಲವೀಶ ಒರಡಿಯಾ, ಅಲ್ಲಿನ ಗಂಭೀರತೆಯ ಬಗ್ಗೆ ಗ್ರಾಪಂಗಳ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿರುವ ಕುರಿತು, ಜಿಲ್ಲಾಧಿಕಾರಿಗಳೊಡನೆ ಚರ್ಚಿಸಿ, ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು "ಕನ್ನಡಪ್ರಭ "ಕ್ಕೆ ತಿಳಿಸಿದರು.
ಎಫ್‌ಐಆರ್ ದಾಖಲಿಸಲಾಗುವುದು : ಪರಿಸರ ಇಲಾಖೆಯಾದಗಿರಿ: ಎರಡು ದಿನಗಳ ಹಿಂದೆ ಕೈಗಾರಿಕಾ ಪ್ರದೇಶದ ಸಮೀಪದ ಕಡೇಚೂರು, ರಾಚೇನಹಳ್ಳಿ ಹಾಗೂ ಶೆಟ್ಟಿಹಳ್ಳಿ ಭಾಗಗಳಲ್ಲಿನ ರಸ್ತೆ ಹಾಗೂ ಹಳ್ಳದ ಸಮೀಪದ ಎಲ್ಲೆಂದರಲ್ಲಿ ಕಪ್ಪನೆಯ ಕೆಮಿಕಲ್ ತ್ಯಾಜ್ಯ ಚೆಲ್ಲಿರುವ ಕುರಿತು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅಲ್ಲಿಗೆ ತೆರಳಿ, ಮಾದರಿ ಸಂಗ್ರಹಿಸಿ ವರದಿ ಸಲ್ಲಿಸಿರುವ ಪರಿಸರ ಇಲಾಖೆಯ ಅಧಿಕಾರಿಗಳು, ಪೊಲೀಸ್ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂದುವರೆದು, ಅವೈಜ್ಞಾನಿಕವಾಗಿ ಇಂತಹ ತ್ಯಾಜ್ಯ ವಿಲೇವಾರಿ ಪ್ರಕರಣಗಳ ತಡೆಗಟ್ಟಲು ಕೈಗಾರಿಕಾ ಪ್ರದೇಶದ 15 ಕಿ.ಮೀ. ವ್ಯಾಪ್ತಿಯಲ್ಲಿ ಪೊಲೀಸ್ ಬೀಟ್ ಹಾಕಬೇಕು, ವೈಜ್ಞಾನಿಕವಾಗಿ ವಿಲೇವಾರಿ ಘಟಕಕ್ಕೆ ತ್ಯಾಜ್ಯ ಪಡೆಯಬೇಕು, ತುರ್ತಾಗಿ ಅಲ್ಲಿನ ತ್ಯಾಜ್ಯ ಸ್ವಚ್ಛಗೊಳಿಸಬೇಕು ಎಂಬ ಶಿಫಾರಸ್ಸುಗಳನ್ನು ಮಾಡಿದೆ.-----------------------------
ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಂಪನಿಗಳ ವಿರುದ್ಧ ಗ್ರಾಮ ಪಂಚಾಯ್ತಿಗಳ ಠರಾವು ಪಾಸು ಮಾಡಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಅಲ್ಲಿನ ಗಂಭೀರತೆಯ ಬಗ್ಗೆ ಜಿಲ್ಲಾಧಿಕಾರಿಗಳೊಡನೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.: ಲವೀಶ ಒರಡಿಯಾ,ಸಿಇಓ ಜಿಪಂ, ಯಾದಗಿರಿ.