ವರ್ಗಾವಣೆ ರದ್ದು ಮಾಡಿ ಇಲ್ಲವೇ ಟಿಸಿ ಕೊಡಿ

| Published : Jul 30 2024, 12:34 AM IST

ಸಾರಾಂಶ

ಅತಿಥಿ ಶಿಕ್ಷಕಿಯೊಬ್ಬರ ಸಂಬಳ ವಿಚಾರದಲ್ಲಿ ಅಕ್ರಮ ಆಗಿದೆ ಎಂದು ಮುಖ್ಯ ಶಿಕ್ಷಕ ಭೈರೇಗೌಡರ ಮೇಲೆ ಆರೋಪಿಸಲಾಗಿದೆ. ಈ ವಿಷಯ ಶಾಲೆ ಹೊರಗೆ ತಾಲೂಕು ಶಿಕ್ಷಕರ ಸಂಘದಲ್ಲಿ ದೊಡ್ದ ಸದ್ದು ಮಾಡಿದೆ. ಎರಡು ಬಣಗಳ ನಡುವೆ ವಿವಾದವಾಗಿ ಮಾರ್ಪಟ್ಟಿದೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಮುಖ್ಯ ಶಿಕ್ಷಕರ ವರ್ಗಾವಣೆ ಆದೇಶ ರದ್ದು ಮಾಡಿ, ಇಲ್ಲವೇ ಮಕ್ಕಳ ಟಿಸಿ(ವರ್ಗಾವಣೆ ಪತ್ರ) ನೀಡಿ ಎಂದು ಒತ್ತಾಯಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿರುವ ಉನ್ನತಿಕೃತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.

ಮುಖ್ಯ ಶಿಕ್ಷಕ ಭೈರೇಗೌಡ ಅವರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಸುಮಾರು 400 ಕ್ಕೂ ಹೆಚ್ಚು ಮಕ್ಕಳು ಹಾಗೂ ನೂರಾರು ಪೋಷಕರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯ ಶಿಕ್ಷಕ ಭೈರೇಗೌಡ ಅ ವರನ್ನು ಇದೇ ಶಾಲೆಯಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿದರು.

ಸ್ವಯಂ ಪ್ರೇರಿತ ವರ್ಗಾವಣೆ

ಸರ್ಕಾರಿ ಶಾಲೆಯನ್ನು ಹೀಗೂ ಅಭಿವೃದ್ಧಿ ಮಾಡಬಹುದು ಎಂದು ತೋರಿಸಿಕೊಟ್ಟ ಮಾದರಿ ಮುಖ್ಯ ಶಿಕ್ಷಕ ಭೈರೇಗೌಡ ಸ್ವಯಂ ಪ್ರೇರಿತರಾಗಿ ವರ್ಗಾವಣೆ ಮಾಡಿಕೊಂಡಿರಬಹುದು. ಆದರೆ ಅವರಿಗೆ ಮಾನಸಿಕವಾಗಿ ಒತ್ತಡ ಹೇರಿ ಅಂತಹ ಸನ್ನಿವೇಶ ಸೃಷ್ಟಿ ಮಾಡಿರುವ ಸಾಧ್ಯತೆ ಇದೆ. ಇದು ಖಂಡನೀಯ. ಮುಖ್ಯ ಶಿಕ್ಷಕರ ವರ್ಗಾವಣೆ ಮಾಡಿದರೆ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅವರನ್ನು ಇಲ್ಲೆ ಮುಂದುವರಿಸಬೇಕು ಎಂದು ಶಾಲೆ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಒತ್ತಾಯಿಸಿದರು.

ಸುಳ್ಳು ಆರೋಪ:

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದರೆಡ್ಡಿ ಮಾತನಾಡಿ, ಯಾವುದೆ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಇಲ್ಲಿನ ಶಿಕ್ಷಕರು ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಹೀಗಿರುವಾಗ ಮುಖ್ಯಶಿಕ್ಷಕರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ವರ್ಗಾವಣೆ ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಗೊಲ್ಲಪಲ್ಲಿಪ್ರಸನ್ನ ದೂರಿದರು.

ಶಿಕ್ಷಣಾಧಿಕಾರಿಗೆ ಘೇರಾವ್ ಸರ್ಕಾರಿ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿ ಮಾಡಿದ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಿಕೊಳ್ಳುವಂತ ಸನ್ನಿವೇಶ ಸೃಷ್ಟಿಸಿದವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರೋತ್ಸಾಹ ದೊರೆಯುತ್ತಿದೆ ಎಂದು ಆರೋಪಿಸಿ ಶಿಕ್ಷಣಾಧಿಕಾರಿಗೆ ಪೋಷಕರು ಘೇರಾವ್ ಹಾಕಿದರು. ಬಳಿಕ ತಹಸೀಲ್ದಾರ್ ಸುಧೀಂದ್ರ ಹಾಗೂ ತಾಲೂಕು ಪಂಚಾಯಿತಿ ಇಒ ರವಿ ಶಾಲೆಗೆ ಆಗಮಿಸಿ ಮಾಹಿತಿ ಪಡೆದರಲ್ಲದೆ, ಅಲ್ಲಿಯ ವಿದ್ಯಮಾನಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದರು.

ಮುಖ್ಯ ಶಿಕರ ವಿರುದ್ಧ ಆರೋಪಅತಿಥಿ ಶಿಕ್ಷಕಿಯೊಬ್ಬರ ಸಂಬಳ ವಿಚಾರದಲ್ಲಿ ಅಕ್ರಮ ಆಗಿದೆ ಎಂದು ಮುಖ್ಯ ಶಿಕ್ಷಕ ಭೈರೇಗೌಡರ ಮೇಲೆ ಆರೋಪಿಸಲಾಗಿದೆ. ಈ ವಿಷಯ ಶಾಲೆ ಹೊರಗೆ ತಾಲೂಕು ಶಿಕ್ಷಕರ ಸಂಘದಲ್ಲಿ ದೊಡ್ದ ಸದ್ದು ಮಾಡಿದೆ. ಎರಡು ಬಣಗಳ ನಡುವೆ ವಿವಾದವಾಗಿ ಮಾರ್ಪಟ್ಟ ಕಾರಣ ಶಿಕ್ಷಕ ಭೈರೇಗೌಡ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಮುಖ್ಯ ಶಿಕ್ಷಕ ಭೈರೇಗೌಡ ತಾವೇ ಆಂಧ್ರದ ಗಡಿಯಂಚಿನಲ್ಲಿರುವ ತಾಲೂಕಿನ ಕೊನೆಯ ಗ್ರಾಮವಾದ ಮುದಿಮಡಗು ಪ್ರೌಢಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.