ಸಾರಾಂಶ
ಕನ್ನಡ ಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆ ಮಾಡಲಾದ ನಿವೇಶನ ಹಂಚಿಕೆಯಲ್ಲಿ ನಿಯಮಗಳ ಉಲ್ಲಂಘನೆ ಆಗಿರುವ ನಾಲ್ಕು ಪ್ರಕರಣಗಳನ್ನು ರದ್ದುಗೊಳಿಸುವಂತೆ ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಬಿಟಿಡಿಎ ಮುಖ್ಯ ಎಂಜಿನಿಯರ್ ನಿರ್ದೇಶನ ನೀಡಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ದೂರಿನ ಮೇರೆಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ, ನಾಲ್ಕು ಪ್ರಕರಣಗಳಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ವರದಿ ನೀಡಿದ್ದಾರೆ. ಪ್ರಕಾಶ ಜೈನ್ ಅವರಿಗೆ ಕೈಗಾರಿಕಾ ಸೆಕ್ಟರ್ ನಲ್ಲಿ ಒ ಮಾದರಿಯ ನಾಲ್ಕು ನಿವೇಶನಗಳನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ್ದಾರೆ. ಹುಚ್ಚಪ್ಪ ಕಿಡಿಯಪ್ಪ ನಾಶಿ ಹಾಗೂ ಅವರ ಮೂವರು ಸಹೋದರರಿಗೆ ಸೆಕ್ಟರ್ ನಂ.50,51 ರಲ್ಲಿ ನೀಡಿರುವ ಇ ಮಾದರಿಯ ನಾಲ್ಕು ನಿವೇಶನಗಳ ಹಂಚಿಕೆಯಲ್ಲಿ ನಿಯಮಗಳ ಉಲ್ಲಂಘನೆ ಆಗಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
ಅಮರನಾಥ ಶೆಟ್ಟಿ ಎಂಬುವರಿಗೆ ನೀಡಿದ್ದಾರೆ ಎನ್ನಲಾದ ಎರಡು ಈ ಮಾದರಿ ನಿವೇಶನಗಳ ಜೊತೆಗೆ ಹೆಚ್ಚುವರಿಯಾಗಿ ನಾಲ್ಕು ಈ ಮಾದರಿ ವಾಣಿಜ್ಯ ನಿವೇಶನ ಹಂಚಿಕೆ ಮಾಡಿರುವುದು ಕೂಡ ನಿಯಮಗಳ ಉಲ್ಲಂಘನೆ ಆಗಿರುವುದು ಕಂಡು ಬಂದಿದೆ. ಬಸವೇಶ್ವರ ವಿದ್ಯಾವರ್ಧಕ ಸಂಘದ 7 ಆಸ್ತಿಗಳ ಅಂದಾಜು ಎರಡು ಎಕರೆ ವಿಸ್ತೀರ್ಣಕ್ಕೆ ನಾಲ್ಕು ಎಕರೆಯಷ್ಟು ನಿವೇಶನ ಹಂಚಿಕೆ ಮಾಡಲಾಗಿದೆ. ಬಿಟಿಡಿಎ 142 ನೇ ಸಭೆಯಲ್ಲಿ ನವನಗರದ ಯುನಿಟ್ 1 ರಲ್ಲಿ ಖಾಲಿ ಇರುವ 59ನೇ ಸೆಕ್ಟರ್ ಪೂರ್ತಿಯಾಗಿ ಬಿವಿವಿ ಸಂಘಕ್ಕೆ ನೀಡುವ ತೀರ್ಮಾನ ಕೈಗೊಂಡಿರುವುದು 2004ರ ನಿಯಮಗಳ ಉಲ್ಲಂಘನೆ ಎಂದು ವರದಿಯಲ್ಲಿ ಹೇಳಲಾಗಿದೆ.ಈ ನಾಲ್ಕು ಪ್ರಕರಣಗಳಲ್ಲಿ ನಿಯಮ ಬಾಹಿರವಾಗಿ ಹಂಚಿಕೆಯಾಗಿರುವ ನಿವೇಶನಗಳನ್ನು ಕೂಡಲೇ ರದ್ದುಗೊಳಿಸಬೇಕು ಹಾಗೂ ಹಂಚಿಕೆ ಆದ ನಿವೇಶನಗಳು ಅವರ ಹೆಸರಿಗೆ ನೋಂದಣಿ ಆಗಿದಲ್ಲಿ ಅದನ್ನು ರದ್ದುಗೊಳಿಸಲು ಈ ಕೂಡಲೇ ಕ್ರಮಕೈಗೊಂಡು ನಿವೇಶನಗಳನ್ನು ಬಿಟಿಡಿಎ ಸ್ವಾಧೀನಕ್ಕೆ ತೆಗೆದುಕೊಳ್ಳಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಟಿಡಿಎ ಮುಖ್ಯ ಎಂಜಿನಿಯರ್‌ಗೆ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಿದ್ದಾರೆ.