ಕನ್ನಡಪ್ರಭ ವಾರ್ತೆ ದಾವಣಗೆರೆ ನೀಟ್-2026 ಪರೀಕ್ಷೆಯನ್ನು ರದ್ದುಪಡಿಸಿರುವುದು ದೇಶದ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವಲ್ಲಿ ಕೇಂದ್ರದಿಂದ ಆದ ಮತ್ತೊಂದು ಭಾರೀ ವೈಫಲ್ಯವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇಂದ್ರ ಸರ್ಕಾರ ಆಟವಾಡಿದೆ. ತಿಂಗಳುಗಳಿಂದ ಸರ್ಕಾರ ಎಲ್ಲವೂ ಪಾರದರ್ಶಕ ಮತ್ತು ಭದ್ರವಾಗಿದೆಯೆಂದು ಹೇಳುತ್ತಿತ್ತು. ಆದರೆ, ಈಗ ಅದೇ ಕೇಂದ್ರದ ಸಂಸ್ಥೆಗಳ ವ್ಯವಸ್ಥೆ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ನೀಟ್-2026 ಪರೀಕ್ಷೆ ರದ್ದುಪಡಿಸಿದ ಕೇಂದ್ರದ ವಿರುದ್ಧ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹರಿಹಾಯ್ದಿದ್ದಾರೆ.ಲಕ್ಷಾಂತರ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಹಗಲು-ರಾತ್ರಿ ಶ್ರಮಪಟ್ಟಿದ್ದಾರೆ. ಆದರೆ, ನ್ಯಾಯಸಮ್ಮತ ಪರೀಕ್ಷೆ ನಡೆಸುವ ಸರ್ಕಾರದ ಮೂಲಭೂತ ಜವಾಬ್ದಾರಿಯೇ ಇಲ್ಲಿ ವಿಫಲವಾಗಿದೆ. ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ಪರೀಕ್ಷೆ ಎನ್ನುವುದು ಕೇವಲ ಒಂದು ಪರೀಕ್ಷೆಯಲ್ಲ. ಅದು ವಿದ್ಯಾರ್ಥಿಗಳು ಹಾಗೂ ಪೋಷಕರ ವರ್ಷಗಳ ತ್ಯಾಗ, ಭರವಸೆ ಮತ್ತು ನಂಬಿಕೆಯ ಪ್ರತೀಕ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ನೀಟ್-2026 ಪರೀಕ್ಷೆಯನ್ನೇ ರದ್ದುಪಡಿಸಿದ್ದು, ಈ ವೈಫಲ್ಯಕ್ಕೆ ಯಾರು ಹೊಣೆ ಎಂಬುದನ್ನು ಅದೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರು ಅನುಭವಿಸಿರುವ ಮಾನಸಿಕ ಒತ್ತಡ ಹಾಗೂ ಹಿಂಸೆಗೆ ಉತ್ತರ ನೀಡಬೇಕಾಗಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.- - -
-12ಕೆಡಿವಿಜಿ3: ಡಾ.ಪ್ರಭಾ ಮಲ್ಲಿಕಾರ್ಜುನ