ಇನ್ವೆಸ್ಟ್‌ ಕರ್ನಾಟಕ 3ಡಿ ಚಿತ್ರದ ಬಾಕಿ ಪಾವತಿ ಆದೇಶ ರದ್ದು

| Published : Jun 20 2024, 01:08 AM IST

ಸಾರಾಂಶ

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ-2022 ಕುರಿತು (ಇನ್ವೆಸ್ಟ್ ಕರ್ನಾಟಕ) 3ಡಿ ಚಿತ್ರ ನಿರ್ಮಿಸಲು ಗುತ್ತಿಗೆ ಪಡೆದುಕೊಂಡಿದ್ದ ಬಿಬಿಪಿ ಸ್ಟುಡಿಯೋ ವರ್ಚ್ಯುವಲ್ ಭಾರತ್ ಪ್ರೈವೇಟ್ ಲಿಮಿಟೆಡ್‌ಗೆ ಬಾಕಿ ಉಳಿಸಿಕೊಂಡಿದ್ದ ಸುಮಾರು ₹2.5 ಕೋಟಿ ಪಾವತಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸಿ ವಿಭಾಗೀಯ ಪೀಠ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ-2022 ಕುರಿತು (ಇನ್ವೆಸ್ಟ್ ಕರ್ನಾಟಕ) 3ಡಿ ಚಿತ್ರ ನಿರ್ಮಿಸಲು ಗುತ್ತಿಗೆ ಪಡೆದುಕೊಂಡಿದ್ದ ಬಿಬಿಪಿ ಸ್ಟುಡಿಯೋ ವರ್ಚ್ಯುವಲ್ ಭಾರತ್ ಪ್ರೈವೇಟ್ ಲಿಮಿಟೆಡ್‌ಗೆ ಬಾಕಿ ಉಳಿಸಿಕೊಂಡಿದ್ದ ಸುಮಾರು ₹2.5 ಕೋಟಿ ಪಾವತಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸಿ ವಿಭಾಗೀಯ ಪೀಠ ಆದೇಶಿಸಿದೆ.

ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಧ್ಯೇಯೋದ್ದೇಶ ಬಿಂಬಿಸುವುದು ಮತ್ತು ವಿಶ್ವ ಮಟ್ಟದಲ್ಲಿ ಕಂಪನಿಗಳಿಗೆ ರಾಜ್ಯದ ಕೊಡುಗೆಗಳನ್ನು ವಿವರಿಸುವ ಕುರಿತ 3ಡಿ ಚಿತ್ರ ನಿರ್ಮಿಸಲು ಬಿಬಿಪಿ ಸ್ಟುಡಿಯೋ ವರ್ಚ್ಯುವಲ್ ಭಾರತ್ ಪ್ರೈವೇಟ್ ಲಿಮಿಟೆಡ್‌ ಹಾಗೂ ಸರ್ಕಾರದ ನಡುವೆ ಒಪ್ಪಂದ ಏರ್ಪಟ್ಟಿತ್ತು. ನಿರ್ಮಾಣ ಮಾಡಲಾಡಿದ್ದ 3ಡಿ ವಿಡಿಯೋವನ್ನು ಸರ್ಕಾರದ ಆಂತರಿಕ ಸಮಿತಿ, ಚಿತ್ರವು ಅತ್ಯಂತ ಸಾಮಾನ್ಯವಾಗಿದ್ದು, ಕಳಪೆ ಮತ್ತು ಅಪೂರ್ಣವಾಗಿದೆ ಎಂದು ತಿಳಿಸಿದ್ದರಿಂದ ಕೊನೆಯ ಘಳಿಗೆಯಲ್ಲಿ ಒಪ್ಪಂದ ರದ್ದುಪಡಿಸಲಾಗಿದೆ. ಗುತ್ತಿಗೆ ರದ್ದತಿಯು ಕೆಲ ಷರತ್ತುಗಳ ಉಲ್ಲಂಘನೆ ವಿಚಾರವಾಗಿದೆ. ಇಂತಹ ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸು ಮಾಡದೆ ಬಾಕಿ ಪಾವತಿಸಲು ಸರ್ಕಾರಕ್ಕೆ ಸೂಚಿಸಿರುವ ಏಕ ಸದಸ್ಯ ಪೀಠದ ಆದೇಶ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸಲಾಗಿದೆ ಎಂದು ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.ಪ್ರಕರಣದ ವಿವರ

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2022ರ ನ. 2ರಿಂದ 4ರವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶ ಕುರಿತು ಸುಮಾರು ₹4 ಕೋಟಿ ಮೊತ್ತದಲ್ಲಿ 3ಡಿ ವಿಡಿಯೋ ಚಿತ್ರ ಸಿದ್ಧಪಡಿಸಲು ಬಿಬಿಪಿ ಸ್ಟುಡಿಯೋ ವರ್ಚ್ಯುವಲ್ ಭಾರತ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ ಮತ್ತು ಸರ್ಕಾರದ ನಡುವೆ ಒಪ್ಪಂದವಾಗಿತ್ತು. ಚಿತ್ರೀಕರಣ ಪ್ರಾರಂಭಿಸಲು ₹1.5 ಕೋಟಿ ಮುಂಗಡ ನೀಡಲಾಗಿತ್ತು. 2022ರ ಆ.11ರಂದು ಚಿತ್ರೀಕರಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಲ್ಲಿಸುವುದಾಗಿ ಕಂಪನಿಯು ತಿಳಿಸಿತ್ತು.

ಈ ನಡುವೆ ಸರ್ಕಾರ ಒಪ್ಪಂದ ರದ್ದುಪಡಿಸಿದ್ದರಿಂದ ಸಂಸ್ಥೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಒಪ್ಪಂದ ರದ್ದತಿಯಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠ, ಒಪ್ಪಂದಂತೆ ಸಂಸ್ಥೆಗೆ ಬಾಕಿ ಮೊತ್ತ ಪಾವತಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಆ ಆದೇಶ ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.