ಸಾರಾಂಶ
- ಕ್ಯಾನ್ಸರ್ ದಿನಾಚರಣೆ ಕಾಲ್ನಡಿಗೆ ಜಾಥಾದಲ್ಲಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ಅಮಿತ್ ಸಲಹೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಬಂದು ಕ್ಯಾನ್ಸರ್ ಬಗ್ಗೆ ಮಾಹಿತಿ ಪಡೆದು, ಪರೀಕ್ಷೆ ಮಾಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಡಾ.ಅಮಿತ್ ಹೇಳಿದರು.ನಗರದ ಗುಂಡಿ ವೃತ್ತದಿಂದ ಭಾನುವಾರ ಬೆಳಗ್ಗೆ ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಕ್ಯಾನ್ಸರ್ ಕಾಯಿಲೆ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವಾರಾಧ್ಯ ಕ್ಯಾನ್ಸರ್, ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಎಸ್.ಎಸ್.ಕೇರ್ ಟ್ರಸ್ಟ್, ಬಾಪೂಜಿ ಎಜುಕೇಷನಲ್ ಅಸೋಸಿಯಷನ್ ಸಹಯೋಗದೊಂದಿಗೆ ಆಯೋಜಿಸಿದ್ದ ಕಾಲ್ನಡಿಗೆ ಜಾಥಾದಲ್ಲಿ ಅವರು ಮಾತನಾಡಿದರು.
ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ 2009 ರಲ್ಲಿ ಪ್ರಾರಂಭವಾಗಿದೆ. ಇಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಗಾದೆ ಮಾತಿನಂತೆ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ಆರಂಭದ ಹಂತದಲ್ಲಿಯೇ ಪರೀಕ್ಷೆ ಮಾಡಿಸಿಕೊಂಡು, ಚಿಕಿತ್ಸೆ ಪಡೆಯಬೇಕು. ಇದರಿಂದ ಮುಂದಾಗುವ ಅನಾಹುತವನ್ನು ತಡೆಯಲು ಸಾಧ್ಯ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಗರ, ಸಿಟಿ, ಹಳ್ಳಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕ್ಯಾನ್ಸರ್ ಕಂಡು ಬರುತ್ತಿದೆ. ಕ್ಯಾನ್ಸರ್ ನೂರಕ್ಕೆ ನೂರರಷ್ಟು ಗುಣಮುಖವಾಗಿಸುವ ಚಿಕಿತ್ಸೆ ಸಹ ಬಂದಿದೆ. ಈ ರೋಗ ಕೊನೆ ಹಂತಕ್ಕೆ ಬಂದಾಗ ಬಹಳ ತೊಂದರೆಯಾಗುತ್ತದೆ. ಆರೋಗ್ಯ ಇಲಾಖೆಯಿಂದ ಗೃಹ ಆರೈಕೆ ಕಾರ್ಯಕ್ರಮಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಪತ್ತೆ ಮಾಡುವ ಕೆಲಸ ನಿರ್ವಹಿಸುತ್ತಿದ್ದೇವೆ. ಯಾರೂ ಭಯ ಪಡೆದೇ ಪ್ರಥಮ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ರೋಗ ನಿವಾರಿಸಬಹುದು ಎಂದರು.
ದಾವಣಗೆರೆ ಜಿಲ್ಲೆಯ ಕ್ಯಾನ್ಸರ್ ರಾಯಭಾರಿ ಆರ್.ಟಿ.ಅರುಣಕುಮಾರ ಮಾತನಾಡಿ, ನಾನು ಕ್ಯಾನ್ಸರ್ ಗೆದ್ದು 15 ವರ್ಷಗಳಾಗಿದೆ. ಇದಕ್ಕೆಲ್ಲಾ ವೈದ್ಯರೇ ಕಾರಣ. ಈ ಬಾರಿಯ ಥೀಮ್ ಕೂಡ "ಅನನ್ಯತೆಯಿಂದ ಒಂದುಗೂಡಿಕೆ ". ನಾವು ನಿಮ್ಮೊಂದಿಗೆ ಇದ್ದೇವೆ. ಕ್ಯಾನ್ಸರ್ ಭಯ ಬೇಡ ಎಂಬ ವೈದ್ಯರ ಸಲಹೆಯಂತೆ ಇಂತಹ ಒಂದು ಅಧ್ಯಾಯ ದಾಟಿಕೊಂಡು ನಾನು ಬಂದಿದ್ದೇನೆ. ನಮ್ಮ ಗುರಿ ಕ್ಯಾನ್ಸರ್ ಮುಕ್ತ ಭಾರತವಾಗಬೇಕು. ತಂಬಾಕುಮುಕ್ತ ಜೀವನ ಉತ್ತಮ ಆರೋಗ್ಯ ನೀಡಲಿದೆ ಎಂದರು.ವಿಶ್ವಾರಾಧ್ಯ ಆಸ್ಪತ್ರೆಯ ಡಾ.ಜಗದೀಶ ಮಾತನಾಡಿ, ಬಾಪೂಜಿ, ಐಎಂಎ, ಡೆಂಟಲ್ ಅಸೋಸಿಯೇಷನ್, ಡೆಂಟಲ್ ಕಾಲೇಜು, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ಈ ಜಾಗೃತಿ ಜಾಥಾ ಯಶಸ್ವಿಯಾಗಿದೆ. ಕ್ಯಾನ್ಸರ್ ಕೇಸುಗಳನ್ನು ಪ್ರಥಮ ಹಂತದಲ್ಲಿಯೇ ಕಂಡುಹಿಡಿದು ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖರಾಗಲು ಸಾಧ್ಯ. ಎಲ್ಲರೂ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವಂತೆ ತಿಳಿಸಿದರು.
ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಜನಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಸಾದ್, ಎಸ್.ಎಸ್.ಕೇರ್ ಟ್ರಸ್ಟ್‌ನ ಎಸ್.ಎಸ್.ಕೇರ್ ಟ್ರಸ್ಟಿನ ಡಾ.ಮೂಗನ ಗೌಡ, ಡಾ.ಲತಾ, ಡಾ.ಬಿ.ಎಸ್.ನಾಗಪ್ರಕಾಶ್, ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ನ ಡಾ.ಸುನಿಲ್ ಬ್ಯಾಡಗಿ, ಪ್ರಾಚಾರ್ಯರು, ಬೋಧಕರು, ವೈದ್ಯರು, ಸಿಬ್ಬಂದಿ ಇತರರು ಇದ್ದರು. - - - -2ಕೆಡಿವಿಜಿ32: ದಾವಣಗೆರೆಯಲ್ಲಿ ಕ್ಯಾನ್ಸರ್ ಕಾಯಿಲೆ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ಕಾಲ್ನಡಿಗೆ ಜಾಥಾದಲ್ಲಿ ಆರ್.ಟಿ.ಅರುಣಕುಮಾರ ಮಾತನಾಡಿದರು.