ತಂಬಾಕು ದುಶ್ಚಟಗಳಿಂದ ಹೊರಬರಲು ನಮ್ಮ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಡಿಯಲ್ಲಿ ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರ ರೂ. ನಂ. 182 ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ಸೌಲಭ್ಯವನ್ನು ಪಡೆದುಕೊಂಡು ತಂಬಾಕು ವ್ಯಸನದಿಂದ ಮುಕ್ತರಾಗಬೇಕು.
ಗದಗ: ತಂಬಾಕು ಸೇವನೆ ಹಾಗೂ ಮದ್ಯಪಾನದಿಂದ ಸಾಮಾನ್ಯವಾಗಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ತಿಳಿಸಿದರು.
ನಗರದ ಪಂ. ಪಂಚಾಕ್ಷರ ಗವಾಯಿಗಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ವಿಭಾಗ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ದೇಶದಲ್ಲಿ ಪ್ರತಿವರ್ಷ 15.62 ಲಕ್ಷ ಕ್ಯಾನ್ಸರ್ ರೋಗಿಗಳು ಪತ್ತೆ ಆಗುತ್ತಿದ್ದಾರೆ. ಕರ್ನಾಟಕದಲ್ಲಿ 89215 ಹೊಸ ಕ್ಯಾನ್ಸರ್ ಪ್ರಕರಣಗಳ ವರದಿಯಾಗಿದ್ದು, ಶೇ. 24.6 ತಂಬಾಕು ಬಳಕೆಯಿಂದ ಕ್ಯಾನ್ಸರ್‌ಗೆ ಒಳಗಾದವರಿದ್ದಾರೆ. ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಪುರುಷರಲ್ಲಿ ಬಾಯಿ, ಅನ್ನನಾಳ, ಶ್ವಾಸಕೋಶ ಹಾಗೂ ಲೀವರ್ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ.
ತಂಬಾಕು ದುಶ್ಚಟಗಳಿಂದ ಹೊರಬರಲು ನಮ್ಮ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಡಿಯಲ್ಲಿ ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರ ರೂ. ನಂ. 182 ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ಸೌಲಭ್ಯವನ್ನು ಪಡೆದುಕೊಂಡು ತಂಬಾಕು ವ್ಯಸನದಿಂದ ಮುಕ್ತರಾಗಬೇಕೆಂದು ತಿಳಿಸಿದರು. ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಾಗೂ ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಸಾಮಾನ್ಯ ಕ್ಯಾನ್ಸರ್‌ಗಳಾದ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಜಿಲ್ಲೆಯ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕೈಗೊಳ್ಳಲಾಗುತ್ತಿದ್ದು, 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕ್ಯಾನ್ಸರ್ ತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದರು.ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಮಾತನಾಡಿ, ಜಿಲ್ಲೆಯಲ್ಲಿ ವೈದ್ಯರಿಗೆ ಮುಂಚೂಣಿಯಲ್ಲಿರುವ ಕ್ಷೇತ್ರ ಆರೋಗ್ಯ ಕಾರ್ಯಕರ್ತೆಯರಿಗೆ, ಶುಶ್ರೂಷಕ ಅಧಿಕಾರಿಗಳಿಗೆ, ಎನ್‌ಪಿಎನ್‌ಸಿಡಿ ಕಾರ್ಯಕ್ರಮ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ಕ್ಯಾನ್ಸರ್ ಕುರಿತು ತರಬೇತಿಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯನ್ನು ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್‌ಸಿಡಿ ಕ್ಲಿನಿಕ್‌ಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಹಾಗೂ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧಿ ವಿತರಿಸಲಾಗುತ್ತಿದೆ ಎಂದರು. ಈ ವೇಳೆ ಕ್ಯಾನ್ಸರ್ ತಜ್ಞ ಡಾ. ಗಣೇಶರಾವ್ ಕುಂದಾಪೂರ ಅವರು ಕ್ಯಾನ್ಸರ್ ಕುರಿತು ಉಪನ್ಯಾಸ ನೀಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ. ರಾಜೇಂದ್ರ ಗೋಡಬೋಲೆ, ಉಪನ್ಯಾಸಕ ಡಿ.ಎಸ್. ಗಾಳಿ, ಡಾ. ಪಂಪಾಪತಿ ಎನ್.ಎಲ್., ಡಾ. ರವಿ ಕಡಗಾವಿ, ಡಾ. ಪ್ರವೀಣ ನಿಡಗುಂದಿ, ಗೋಪಾಲ ಸುರಪುರ, ರಮೇಶ ಅರಹುಣಸಿ, ವಿಠ್ಠಲ್ ನಾಯಕ್, ಬಸಮ್ಮ ಚಿತ್ತರಿಗಿ, ವೀರೇಶ ಮದಕಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ವೈದೇಹಿ ಪ್ರಾರ್ಥಿಸಿದರು. ಮುತ್ತುನಗೌಡ ಎಸ್. ರಬ್ಬನಗೌಡ್ರ ನಿರೂಪಿಸಿದರು. ಅಜಯ್ ಪಂಡಿತ ಸ್ವಾಗತಿಸಿದರು.