ಮಂಗಳೂರು: ಕೆಎಂಸಿ ಆಸ್ಪತ್ರೆ ಅತ್ತಾವರದ ಮಕ್ಕಳ ಚಿಕಿತ್ಸಾ ವಿಭಾಗವು ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್‌ ಆಂಡ್‌ ಡೆವಲಪರ್ಸ್‌ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನವನ್ನು ಆಚರಿಸಿತು.ಮುಖ್ಯ ಅತಿಥಿ, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನ ಭರತನಾಟ್ಯ ಕಲಾವಿದೆ ರೆಮೋನಾ ಎವೆಟ್ ಪೆರೇರಾ ಮಾತನಾಡಿ, ನಾನು ನನ್ನ ವಿಶ್ವ ದಾಖಲೆಗಾಗಿ ಪ್ರದರ್ಶನ ನೀಡುತ್ತಿದ್ದಾಗ ಕೆಎಂಸಿ ಆಸ್ಪತ್ರೆ ನನಗೆ ಆಧಾರಸ್ತಂಭವಾಗಿತ್ತು ಎಂದು ಸ್ಮರಿಸಿದರು. ಮಕ್ಕಳು ಎಲ್ಲ ಅಡೆತಡೆಗಳ ಹೊರತಾಗಿಯೂ ಅವರ ಕನಸುಗಳನ್ನು ಮುಂದುವರಿಸಬೇಕು ಎಂದು ಪ್ರೋತ್ಸಾಹಿಸಿದರು.

ತುಳು ಚಲನಚಿತ್ರ ನಟ ವಿಸ್ಮಯ ವಿನಾಯಕ್ ಮಾತನಾಡಿ, ಮಿಮಿಕ್ರಿ ಪ್ರದರ್ಶನ ನೀಡಿದರು.

ಕೆಎಂಸಿ ಮಂಗಳೂರಿನ ಡೀನ್ ಡಾ.ಬಿ. ಉನ್ನಿಕೃಷ್ಣನ್ ಅವರು ಅತಿಥಿಯಾಗಿ ಭಾಗವಹಿಸಿ, ಬಾಲ್ಯದ ಕ್ಯಾನ್ಸರ್‌ನ್ನು ಗುಣಪಡಿಸುವಲ್ಲಿ ಶೇ.80ರಷ್ಟು ಯಶಸ್ಸನ್ನು ಉಲ್ಲೇಖಿಸಿ, ಮಕ್ಕಳ ಈ ಮಾರಕ ಕಾಯಿಲೆ ವಿರುದ್ಧ ಕೆಎಂಸಿ ಆಸ್ಪತ್ರೆಯು ಸಮರ್ಪಿತ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದರು.ವೇದಿಕೆಯಲ್ಲಿ ಮಾಹೆ ಮಣಿಪಾಲ್‌ ಸಿಒಒ ಡಾ. ಸುಧಾಕರ್ ಕಾಂತಿಪುಡಿ, ಅತ್ತಾವರ ಕೆಎಂಸಿಯ ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮಡಿ ಇದ್ದರು. ಮಕ್ಕಳ ಹೆಮಟಾಲಜಿಸ್ಟ್ ಮತ್ತು ಆಂಕೊಲಾಜಿಸ್ಟ್ ಸಲಹೆಗಾರ ಡಾ. ಹರ್ಷ ಪ್ರಸಾದ ಎಲ್. ಸ್ವಾಗತಿಸಿದರು. ಪೀಡಿಯಾಟ್ರಿಕ್ಸ್ ವಿಭಾಗ ಮುಖ್ಯಸ್ಥ ಡಾ. ಸುಚೇತಾ ರಾವ್ ವಂದಿಸಿದರು. ಡಾ. ದಿವ್ಯಾ ಮತ್ತು ಡಾ. ಅದಿತಿ ನಿರೂಪಿಸಿದರು.