ಪ್ರತಿಯೊಬ್ಬರು ರಾಸಾಯನಿಕ ಯುಕ್ತ ಆಹಾರ ಸೇವನೆ ಮಾಡುತ್ತಾ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾ. ಡಿ.ಅನುಪಮ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರತಿಯೊಬ್ಬರು ರಾಸಾಯನಿಕ ಯುಕ್ತ ಆಹಾರ ಸೇವನೆ ಮಾಡುತ್ತಾ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾ. ಡಿ.ಅನುಪಮ ತಿಳಿಸಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇವರುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಎಚ್ ಪಿ ವಿ ಲಸಿಕೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಆರೋಗ್ಯ ರಕ್ಷಣೆಗೆ ಧೈರ್ಯ ತೋರಿಸಬೇಕಾಗಿದೆ. ಸರ್ಕಾರವು ಹಲವಾರು ವ್ಯಾಕ್ಸಿನ್ ಗಳನ್ನು ಜಾರಿಗೆ ತಂದಿದ್ದರೂ ಅವುಗಳನ್ನ ಹಾಕಿಸಿಕೊಳ್ಳದೆ ಕಾಯಿಲೆಗೆ ಬಲಿಯಾಗುತ್ತಿರುವುದು ಹೆಚ್ಚು ಕಂಡುಬರುತ್ತದೆ. ಹದಿನಾಲ್ಕು - ಹದಿನೈದು ವಯಸ್ಸಿನ ಹೆಣ್ಣುಮಕ್ಕಳು ಗರ್ಭಕಂಠಕ ಕ್ಯಾನ್ಸರ್ ವಿರುದ್ಧ ಲಸಿಕೆಯನ್ನು ಹಾಕಿಸಿಕೊಂಡು ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಕೊರೊನಾ ಸಮಯದಲ್ಲಿ ವೈದ್ಯರು ಹೆದರಿ ಚಿಕಿತ್ಸೆ ನೀಡದಿದ್ದರೆ ನಾವುಗಳು ಇನ್ನು ಹೆಚ್ಚು ಸಾವಿನ ಸಂಖ್ಯೆಯನ್ನು ಕಾಣಬೇಕಾಗುತ್ತಿತ್ತು. ಆದ್ದರಿಂದ ಯಾವುದೇ ಕಾಯಿಲೆಗೆ ಹೆದರದೆ ಇದ್ದರೆ ಇನ್ನೂ ಹೆಚ್ಚು ಕಾಲ ಆರೋಗ್ಯದಿಂದ ಕೂಡಿರಬಹುದು ಎಂದು ತಿಳಿಸಿದರು.ಅಧಿಕ ಹಿರಿಯ ಸಿವಿಲ್ ನ್ಯಾ. ಪೂರ್ಣಿಮಾ ಕೆ ಯಾದವ್ ಮಾತನಾಡಿ, ತಾಯಿಯಾಗಿ ಮಕ್ಕಳನ್ನು ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ರಕ್ಷಣೆಗಾಗಿ ಎಚ್ ಪಿ ವಿ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು. ಸರ್ಕಾರಕ್ಕೆ ಜವಾಬ್ದಾರಿ ಇರುವುದರಿಂದ ಆರೋಗ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೊಸ ಹೊಸ ಲಸಿಕೆಗಳನ್ನು ಜಾರಿಗೆ ತರುತ್ತಿದೆ. ಅವುಗಳನ್ನು ನಾವುಗಳು ತಪ್ಪದೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಅಧಿಕಾರಿ ಜೆ.ವಿಜಯ್ ಕುಮಾರ್ ಮಾತನಾಡಿ, ಯುವತಿಯರ ಭವಿಷ್ಯದ ಆರೋಗ್ಯವನ್ನು ರಕ್ಷಿಸಲು ಎಚ್ ಪಿ ವಿ ಲಸಿಕೆ ಸಹಕಾರಿ. ಲಸಿಕೆ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾಗುವ ಹೆಚ್ಚಿನ ವೆಚ್ಚ ಮತ್ತು ದೈಹಿಕ-ಮಾನಸಿಕ ತೊಂದರೆಗಳನ್ನು ತಪ್ಪಿಸಲು ನೆರವಾಗುತ್ತದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಲಸಿಕೆಯನ್ನು 9–14 ವರ್ಷದ ಬಾಲಕಿಯರಿಗೆ ನೀಡುವುದು ಅತ್ಯಂತ ಪರಿಣಾಮಕಾರಿಯಾಗಿದೆ. 15 ವರ್ಷ ಮೇಲ್ಪಟ್ಟವರೂ ವೈದ್ಯರ ಸಲಹೆಯಂತೆ ಲಸಿಕೆ ಪಡೆಯಬಹುದು.ಲಸಿಕೆ ಪಡೆದ ನಂತರವೂ ವೈದ್ಯರ ಸಲಹೆಯಂತೆ ನಿಯಮಿತ ಗರ್ಭಕಂಠ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದರು.ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾ. ಎಸ್.ಪಿ.ಕಿರಣ್, ಅಧಿಕ ಸಿವಿಲ್ ನ್ಯಾ.ಎಚ್.ವಿ.ಸವಿತರಾಣಿ, ಸರ್ಕಾರಿ ಅಭಿಯೋಜಕರಾದ ಕೆ.ಶೋಭಾ, ಅಕ್ಷತಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಿ.ರವೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ನಟರಾಜು, ಡಾ. ಕೇಶವ್ ರಾಜ್, ಡಾ.ಪ್ರಭಾ ಡಾ.ಸುದರ್ಶನ್, ಜಗದೀಶ್, ಮಧು, ಇನ್ನರ್ ಕ್ಲಬ್ ಪದಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ, ಮಕ್ಕಳು, ಪೋಷಕರು ಮತ್ತಿತರರು ಇದ್ದರು.