ಧೂಮಪಾನ, ಮದ್ಯಪಾನ, ಬೊಜ್ಜು, ಮುಂತಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಸೂಕ್ತ ಗಮನ ಹರಿಸುವ ಜತೆಗೆ ಶಿಸ್ತುಬದ್ಧ ಆಹಾರ ಜೀವನ ಶೈಲಿಯಲ್ಲಿ ರೂಢಿಸಿಕೊಂಡಲ್ಲಿ ಇದರಿಂದ ಹೊರ ಬರಬಹುದು. ವಿಶ್ವದಲ್ಲೇ ಭಾರತದಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳ ವರದಿಯಾಗುತ್ತಿರುವ ಮೂರನೇ ರಾಷ್ಟ್ರ.

ಕನ್ನಡಪ್ರಭ ವಾರ್ತೆ ಮದ್ದೂರು

ಕ್ಯಾನ್ಸರ್ ರೋಗವು ನೂರಕ್ಕೂ ಹೆಚ್ಚು ವಿಧಗಳಲ್ಲಿ ವ್ಯಾಪಿಸಿದ್ದು, ಶಿಸ್ತುಬದ್ಧ ಜೀವನದ ಮೂಲಕ ಈ ವ್ಯಾದಿಯಿಂದ ಹೊರವಿರಲು ಸಾಧ್ಯ ಎಂದು ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ತಾಲೂಕು ಸೋಮನಹಳ್ಳಿ ಮೊರಾರ್ಜಿ ದೇಸಾಯ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಬಗ್ಗೆ ಭಯ ಬೇಡ ಜಾಗೃತಿ ಇರಲೆಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯನ ಕೂದಲು ಮತ್ತು ಉಗುರು ಹೊರತುಪಡಿಸಿ ದೇಹದ ಎಲ್ಲಾ ಭಾಗಕ್ಕೂ ಕ್ಯಾನ್ಸರ್ ತಗಲುವ ಕುರಿತು ಹೇಳಿದರು.

ಧೂಮಪಾನ, ಮದ್ಯಪಾನ, ಬೊಜ್ಜು, ಮುಂತಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಸೂಕ್ತ ಗಮನ ಹರಿಸುವ ಜತೆಗೆ ಶಿಸ್ತುಬದ್ಧ ಆಹಾರ ಜೀವನ ಶೈಲಿಯಲ್ಲಿ ರೂಢಿಸಿಕೊಂಡಲ್ಲಿ ಇದರಿಂದ ಹೊರ ಬರಬಹುದು. ವಿಶ್ವದಲ್ಲೇ ಭಾರತದಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳ ವರದಿಯಾಗುತ್ತಿರುವ ಮೂರನೇ ರಾಷ್ಟ್ರವೆಂದು ಆತಂಕ ವ್ಯಕ್ತಪಡಿಸಿದರು.

ಪುರುಷರು ಮತ್ತು ಮಹಿಳೆಯರಲ್ಲೂ ಹೆಚ್ಚಾಗಿ ಕಂಡು ಬರುವ ಈ ವ್ಯಾದಿ ಆರಂಭದಲ್ಲೇ ಪತ್ತೆ ಹಚ್ಚಿ ಸಕಾಲಕ್ಕೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣ ಹೊಂದುವ ಸಾಧ್ಯತೆ ಕುರಿತು ವಿವರಿಸಿ ಕ್ಯಾನ್ಸರ್ ರೋಗಕ್ಕೆ ಹೆದರದೆ ಮಾನಸಿಕವಾಗಿ ಧೈರ್ಯದಿಂದ ಹಿಮ್ಮೆಟ್ಟಿಸಬೇಕೆಂಬ ಸಲಹೆ ನೀಡಿದರು.

ಮಿಮ್ಸ್ ಪ್ರಾಧ್ಯಾಪಕ ಡಾ.ಸಿದ್ಧಲಿಂಗಪ್ಪ ಹೂಗಾರ್ ಕಾರ್ಯಕ್ರಮದ ವಿಷಯ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ಪ್ರಾಂಶುಪಾಲೆ ಆಶಾ, ಅಲಯನ್ಸ್ ಸಂಸ್ಥೆ ಪದಾಧಿಕಾರಿಗಳಾದ ಡೇವಿಡ್, ಕೃಷ್ಣಪ್ಪ, ದಿವ್ಯ, ಸುನೀತಾ, ನಿಲಯ ಪಾಲಕ ಗಿರೀಶ್, ಶಿಕ್ಷಕರಾದ ಭವಾನಿ, ಲೋಕೇಶ್, ಮಂಜುಳಾ, ಅನುಪಮಾ, ದಿವ್ಯ, ರಂಜಿತ, ಶಿಲ್ಪಾ ಇತರರಿದ್ದರು.ಜ.19 ರಂದು ಆಯವ್ಯಯ (ಬಜೆಟ್) ನ ಬಗ್ಗೆ ಪೂರ್ವಭಾವಿ ಸಭೆ

ಮಂಡ್ಯ: ನಗರಸಭೆಯ 2026-27ನೇ ಸಾಲಿನ ಆಯವ್ಯಯ (ಬಜೆಟ್)ದ ಬಗ್ಗೆ ಚರ್ಚಿಸಲು ಜ.19 ರಂದು ಬೆಳಗ್ಗೆ 11 ಗಂಟೆಗೆ ನಗರಸಭೆಯ ಕಚೇರಿಯ ಅಮೃತ ಭವನ ಸಭಾಂಗಣದಲ್ಲಿ ಪೂರ್ವಭಾವಿಯಾಗಿ ಸಭೆ ಕರೆಯಲಾಗಿದೆ. ಸದರಿ ಸಭೆಗೆ ನಗರಸಭೆ ಚುನಾಯಿತ ಪ್ರತಿನಿಧಿಗಳು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಗರದ ನೊಂದಾಯಿತ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು, ಹಿರಿಯ ನಾಗರೀಕರು, ಸಮಾಜ ಸೇವಕರು ಮತ್ತು ಗಣ್ಯರು ಹಾಗೂ ಎಲ್ಲಾ ಆಸಕ್ತ ನಾಗರೀಕರನ್ನು ಗೌರವಪೂರ್ವಕವಾಗಿ ಪಾಲ್ಗೊಂಡು ತಮ್ಮ ಸೂಕ್ತ ಸಲಹೆ ನೀಡುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.

ಬಾಲ್ಯವಿವಾಹ ಮುಕ್ತ ಗ್ರಾಪಂಗೆ ಅರ್ಜಿ ಆಹ್ವಾನ

ಮಂಡ್ಯ: ಸರ್ಕಾರದ ಆದೇಶದ ಅನ್ವಯ 2024-25ನೇ ಸಾಲಿನ ಬಾಲ್ಯವಿವಾಹ ಮುಕ್ತ ಕರ್ನಾಟಕವನ್ನಾಗಿಸಲು ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಶೂನ್ಯ ಸಹಿಷ್ಣುತೆ ಹೊಂದಿರುವ(ಬಾಲ್ಯವಿವಾಹ ಮುಕ್ತ ಗ್ರಾಪಂ) ಗ್ರಾಮ ಪಂಚಾಯ್ತಿಗಳನ್ನು ಗುರುತಿಸಿ ಪ್ರತಿ ಜಿಲ್ಲೆಯಿಂದ ಒಂದು ಗ್ರಾಮ ಪಂಚಾಯ್ತಿಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕಳೆದ 2024-25ನೇ ಸಾಲಿನಲ್ಲಿ ಯಾವುದೇ ಬಾಲ್ಯವಿವಾಹ ನಡೆಯದ ಗ್ರಾಪಂಗಳು ಅರ್ಜಿ ಸಲ್ಲಿಸಬಹುಗು. ಆಯ್ಕೆಯಾದ ಬಾಲ್ಯವಿವಾಹ ಮುಕ್ತ ಗ್ರಾಪಂಗೆ ಪ್ರಶಸ್ತಿಯೊಂದಿಗೆ 25,000 ನಗದು ನೀಡಲಾಗುತ್ತದೆ. ಅರ್ಹ ಗ್ರಾಪಂಗಳು ಜನವರಿ 26 ರೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾಘಟಕ ಮಂಡ್ಯ ಕಚೇರಿಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಘಟಕ, ಸುಭಾಷ್‌ ನಗರ, 6ನೇ ಕ್ರಾಸ್, ಮಂಡ್ಯ ಇವರನ್ನು ಸಂಪರ್ಕಿಸಬಹುದು.