ಈ ಬಾರಿ ನನಗೆ ಅವಕಾಶ ಸಿಕ್ಕಿದೆ ಮತ ನೀಡಿ ಆಶೀರ್ವದಿಸಿ: ಬಾಲರಾಜು

| Published : Apr 06 2024, 12:52 AM IST

ಈ ಬಾರಿ ನನಗೆ ಅವಕಾಶ ಸಿಕ್ಕಿದೆ ಮತ ನೀಡಿ ಆಶೀರ್ವದಿಸಿ: ಬಾಲರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದ ನಾಯಕರಾಗಿದ್ದ ದಿವಂಗತ ರಾಜಶೇಖರ ಮೂರ್ತಿಯವರು ಆರ್. ಧ್ರುವನಾರಾಯಣ್ ನಾನು ಸೇರಿದಂತೆ ಇತರೆ ವರ್ಗದ ನಾಯಕರನ್ನು ಆಶೀರ್ವದಿಸಿ ಬೆಳೆಸಿದ್ದಾರೆ. ‌ಅವರಂತೆ ನಾವು ಕೂಡ ಪ್ರಾಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇವೆ

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಶಾಸಕನಾಗಿ ಮಾಡಿದಷ್ಟೆ ಕೆಲಸಗಳನ್ನು ಮಾಜಿಯಾದ ನಂತರವು ದಶಕಗಳಿಂದ ನಿರಂತರವಾಗಿ ಜನರ ಸೇವೆಗಳನ್ನು ಮಾಡಿಕೊಂಡಿದ್ದು ಬಂದಿದ್ದೇನೆ. ಈ ಬಾರಿ ನನಗೆ ಅವಕಾಶ ಸಿಕ್ಕಿದೆ ಮತ ನೀಡಿ ಆಶೀರ್ವದಿಸುವಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.‌ಬಾಲರಾಜು ಮನವಿ ಮಾಡಿದರು.

ಪಟ್ಟಣದ ಮಹದೇವಪ್ಪ ಸ್ಮಾರಕ ಭವನದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಬೈರಾಪುರ ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಈ ಭಾಗದ ನಾಯಕರಾಗಿದ್ದ ದಿವಂಗತ ರಾಜಶೇಖರ ಮೂರ್ತಿಯವರು ಆರ್. ಧ್ರುವನಾರಾಯಣ್ ನಾನು ಸೇರಿದಂತೆ ಇತರೆ ವರ್ಗದ ನಾಯಕರನ್ನು ಆಶೀರ್ವದಿಸಿ ಬೆಳೆಸಿದ್ದಾರೆ. ‌ಅವರಂತೆ ನಾವು ಕೂಡ ಪ್ರಾಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇವೆ ಎಂದರು.

ಲೋಕಸಭಾ ಸದಸ್ಯನಾಗುವಷ್ಟು ಪ್ರಬುದ್ದತೆ ಇದೆಯೇ?

ಬಿಜೆಪಿ ಹಿರಿಯ ಮುಖಂಡ ಸಿ. ರಮೇಶ್ ಮಾತನಾಡಿ, ಚಾಮರಾಜನಗರ ಕ್ಷೇತ್ರದಲ್ಲಿ ನಿಂತು ಸೋತರೆ ತಮ್ಮ ಮಂತ್ರಿಗಿರಿ ಹೋಗುತ್ತದೆ ಎಂಬ ಭಯದಿಂದ ಡಾ.ಎಚ್.ಸಿ. ಮಹದೇವಪ್ಪ ಅವರು ಮಗನಿಗೆ ಟಿಕೆಟ್ ಕೊಡಿಸಿ ನಿಲ್ಲಿಸಿದ್ದಾರೆ. ಅವರ ಮಗನಿಗೆ ಲೋಕಸಭಾ ಸದಸ್ಯನಾಗುವಷ್ಟು ಪ್ರಬುದ್ಧತೆ ಇದೆಯೇ ಎಂದು ಪ್ರಶ್ನಿಸಿದರು.

ಈಗ ಗಾಂಧೀಜಿಯವರ ಕಾಂಗ್ರೆಸ್ ಎಲ್ಲಿದೆ, ಇರುವುದು ಸಿದ್ದರಾಮಯ್ಯ ಕಾಂಗ್ರೆಸ್, ಮಹದೇವಪ್ಪ ಕಾಂಗ್ರೆಸ್ ಹೊರತು ಗಾಂಧೀಜಿಯವರ ಕಾಂಗ್ರೆಸ್ ಅಲ್ಲ.‌ಮುನಿಸಿಪಾಲಿಟಿಯಲ್ಲಿ ಸ್ವಚ್ಛತೆಯಾಗುತ್ತಿಲ್ಲ.‌ಶಾಸಕರಾಗಿ ಜನರ ಸಮಸ್ಯೆ ಕೇಳದೇ, ಮಗನನ್ನು ಈಗ ಎಂಪಿ ಮಾಡಲು ಹೊರಟಿದ್ದಾರೆ ಎಂದು ಅವರು ಟೀಕಿಸಿದರು.

ತೋಟದಪ್ಪ ಬಸವರಾಜು ಪ್ರತ್ಯಕ್ಷ...!

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗಲಿಲ್ಲ ಎಂದು ಮುನಿಸಿಕೊಂಡು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿಕಾಣಿಸಿ ಕೊಂಡು ಅಚ್ಚರಿ ಮೂಡಿಸಿದರು.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆದೇಶದ ಮೇರೆಗೆ ತಾವು ಮತ್ತೆ ಪಕ್ಷದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ರಾಜೀನಾಮೆ ಏನು ಇಲ್ಲ, ಬಸವರಾಜು ಅವರಿಗೆ ಪಕ್ಷದಲ್ಲಿ ಉತ್ತಮವಾದ ಗೌರವ ಇದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದ ಹಿನ್ನೆಲೆ ಪಕ್ಷದ ಅಭ್ಯರ್ಥಿ ಬಾಲರಾಜ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದಾಗಿ ಹೇಳಿದರು.

ಮಾಜಿ ಸಚಿವ ಎನ್‌. ಮಹೇಶ್, ಮಂಜಣ್ಣ, ಮಹದೇವಯ್ಯ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ, ತೋಟದಪ್ಪ ಬಸವರಾಜು, ಓಬಿಸಿ ಮಹೇಶ್, ಪುರಸಭಾ ಸದಸ್ಯ ಅರ್ಜುನ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೇಳವರ ಹುಂಡಿ ಸಿದ್ದಪ್ಪ,ಶರತ್ ಪುಟ್ಟಬುದ್ದಿ, ಮಲ್ಲಪ್ಪ, ಬಿ. ವೀರಭದ್ರಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಗಳಿ ಯೋಗೇಶ್, ಮಣಿಕಂಠರಾಜ್ ಗೌಡ, ಚೌಹಳ್ಳಿ ಸಿದ್ದರಾಜು, ಕ್ಷೇತ್ರ ಅಧ್ಯಕ್ಷ ಶಿವಕುಮಾರ್, ಶಿವಪ್ರಸಾದ್, ಕೆ.ಎನ್. ಪ್ರಭುಸ್ವಾಮಿ ಇದ್ದರು.