ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ದೇಶದಲ್ಲಿ ಮತದಾನಕ್ಕೆ ಅರ್ಹರಾದವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಚುನಾವಣಾ ಆಯೋಗ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಮತದಾನದಲ್ಲಿ ಪಾಲ್ಗೊಳ್ಳುವ ಮಹತ್ವ ತಿಳಿಸುವುದಕ್ಕಾಗಿ ಸ್ವೀಪ್ ಕಾರ್ಯಕ್ರಮ ರೂಪಿಸಿ ಎಲ್ಲೆಡೆ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ.
ಮತದಾನಕ್ಕೆ ಅರ್ಹರಾದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಮತ್ತು ಮತದಾನದ ದಿನ ಮತಗಟ್ಟೆಗೆ ಹೋಗಿ ಮತದಾನ ಮಾಡುವಂತೆ ಪ್ರಚೋದಿಸಲು ಸ್ವೀಪ್ ಕಾರ್ಯಕ್ರಮ ರೂಪಿಸಲಾಗಿದೆ. ಆದರೆ, ಚುನಾವಣಾ ಆಯೋಗದ ಈ ಪ್ರಯತ್ನಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ. ವಿಶೇಷವಾಗಿ ನಗರ ಪ್ರದೇಶಗಳ ಮತದಾರರ ಮೇಲೆ ಈ ಪ್ರಯತ್ನಗಳು ಹೆಚ್ಚಿನ ಪರಿಣಾಮ ಬೀರುವಲ್ಲಿ ಸಫಲವಾಗಿಲ್ಲ ಎಂಬುದು ಈ ಹಿಂದಿನ ಚುನಾವಣೆಗಳ ಮತದಾನ ಪ್ರಮಾಣದ ಮೇಲೆ ಗೊತ್ತಾಗುತ್ತಿದೆ.ಹಿಂದೆ ಬಿದ್ದ ನಗರ ಮತದಾರರು:
ಸುಶಿಕ್ಷಿತ ಮತ್ತು ಜಾಗೃತ ನಾಗರಿಕರು ಎಂಬ ಹಣೆಪಟ್ಟಿ ಹೊಂದಿರುವ ನಗರ ಪ್ರದೇಶಗಳ ಜನರು ಮತದಾನದಲ್ಲಿ ಗ್ರಾಮೀಣ ಪ್ರದೇಶಗಳ ಜನರಿಗಿಂತ ಹಿಂದೆ ಬಿದ್ದಿರುವುದು ಅಂಕಿ ಸಂಖ್ಯೆಗಳ ಮುಖಾಂತರ ಸಾಬೀತಾಗಿದೆ. ನಗರ ಪ್ರದೇಶಗಳ ಜನರು ಮಾಧ್ಯಮಗಳ ಮೂಲಕ ಹೊಮ್ಮುವ ಮಾಹಿತಿ ತೆರೆದುಕೊಂಡಿದ್ದು ರಾಜಕೀಯ ಆಗು-ಹೋಗುಗಳ ಬಗ್ಗೆ ತಿಳಿವಳಿಕೆ ಹೊಂದಿರುತ್ತಾರೆ. ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸುವ ಮತ್ತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಟೀಕೆ-ಟಿಪ್ಪಣೆ ಮಾಡುವ ಈ ಸುಶಿಕ್ಷಿತ ನಾಗರಿಕರು ಮತದಾನ ಮಾಡುವ ಬಗ್ಗೆ ಇದೇ ಉತ್ಸುಕತೆ ತೋರುವುದಿಲ್ಲ. ಕುಂಟು ನೆಪ ಹೇಳಿ ಚುನಾವಣೆ ದಿನ ಮತಗಟ್ಟೆಯಿಂದ ದೂರ ಉಳಿಯುತ್ತಾರೆ ಎಂಬುದು ಬೇಸರದ ಸಂಗತಿ.ಮತದಾರರ ಪಟ್ಟಿ ತಯಾರಾಗಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುವ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ಬಿತ್ತರಿಸಿದರೂ ಈ ಸುಶಿಕ್ಷಿತ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದಿಲ್ಲ. ಮತದಾನದ ದಿನ ಮತಗಟ್ಟೆಯಲ್ಲಿ ಅಧಿಕಾರಿಗಳೊಂದಿಗೆ ಜಗಳ ತೆಗೆದು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವ ಬಗ್ಗೆ ದೂರುವುದು ಸಾಮಾನ್ಯ ನೋಟ. ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮೀಣ ಜನತೆ ಮತದಾನದ ದಿನ ಸುಡುವ ಬಿಸಿಲು ಮತ್ತು ಪ್ರತಿಕೂಲ ಹವಾಮಾನ ಲೆಕ್ಕಿಸದೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಾರೆ.
ಸ್ವೀಪದಿಂದ ಏನೆಲ್ಲಾ ಪ್ರಯತ್ನ:ಸ್ವೀಪ್ ಮೂಲಕ ಅಧಿಕಾರಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್ ರ್‍ಯಾಲಿ, ಮ್ಯಾರಥಾನ್, ವಾಕಥಾನ್, ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಕ್ರೀಡಾ ಸ್ಪರ್ಧೆ ಇತ್ಯಾದಿ ಏರ್ಪಡಿಸಿ ಮತದಾನದ ಪ್ರಮಾಣ ಹೆಚ್ಚಿಸಲು ಕಸರತ್ತು ಮಾಡುತ್ತಾರೆ. ಆದರೆ, ಈ ಪ್ರಯತ್ನದ ಫಲ ಏನಾಯ್ತು ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಮತದಾರರು ಈ ಕಾರ್ಯಕ್ರಮಗಳನ್ನು ಮನರಂಜನೆಯಂತೆ ಪರಿಗಣಿಸುತ್ತಾರೆ ಎಂದು ರಾಜಕೀಯ ವಿಶ್ಲೇಷಕರಾದ ಪಿ.ಎಚ್. ನೀರಲಕೇರಿ ಹೇಳುತ್ತಾರೆ.
ಧಾರವಾಡದ ಕಲ್ಯಾಣನಗರ ಪ್ರದೇಶ ಅತ್ಯಂತ ಸುಶಿಕ್ಷಿತ, ಉನ್ನತ ಪದವಿ ಪಡೆದಿರುವವರು ವಾಸವಿರುವ ಬಡಾವಣೆ. ಉನ್ನತ ಅಧಿಕಾರಿಗಳು, ಹಿರಿಯ ಪ್ರಾಧ್ಯಾಪಕರು, ಬುದ್ಧಿಜೀವಿಗಳು ವಾಸವಿರುವ ಈ ಪ್ರದೇಶದಲ್ಲಿ ಪ್ರತಿ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನ ಆಗುತ್ತಿರುವುದು ವಿಪರ್ಯಾಸ. ವಿಧಾನಸಭೆ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿರುವುದನ್ನು ಅಂಕಿ ಸಂಖ್ಯೆಗಳು ಸೂಚಿಸುತ್ತವೆ. ಲೋಕಸಭಾ ಕ್ಷೇತ್ರ ವಿಶಾಲವಾಗಿದ್ದು, ಇದರಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಇಡೀ ಕ್ಷೇತ್ರದಲ್ಲಿ ಪರಿಚಿತರಾಗಿರುವುದಿಲ್ಲ. ಇದಕ್ಕೆ ಪ್ರತಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಮತದಾರರೊಂದಿಗೆ ಬಹುತೇಕ ನೇರ ಸಂಪರ್ಕದಲ್ಲಿದ್ದು, ನಾಗರಿಕರಿಗೆ ಹತ್ತಿರವಾಗಿರುತ್ತಾರೆ. ಇದರಿಂದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಸ್ವಲ್ಪ ಹೆಚ್ಚು ಎಂಬುದನ್ನು ಗಮನಿಸಬಹುದು.ಗ್ರಾಮಾಂತರ ಪ್ರದೇಶಗಳಲ್ಲಿ ರಾಜಕೀಯ ವ್ಯವಸ್ಥೆಯಿಂದ ನೇರವಾಗಿ ಲಾಭ ಪಡೆದವರು ಅಥವಾ ಲಾಭದಿಂದ ವಂಚಿತರಾದವರು ಇರುವುದರಿಂದ ಅವರ ಮೇಲೆ ರಾಜಕೀಯ ಆಗು-ಹೋಗುಗಳ ನೇರ ಪ್ರಭಾವ ಇರುತ್ತದೆ. ಹೀಗಾಗಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆ ಎಂಬುದು ಸಹ ರಾಜಕೀಯ ವಿಶ್ಲೇಷಣೆ.
ಒಟ್ಟಾರೆ ಗ್ರಾಮೀಣಕ್ಕಿಂತ ನಗರದ ಜನತೆ ಮಾತ್ರ ಮತದಾನದಲ್ಲಿ ಹಿಂದೆ ಬಿದ್ದಿರುವುದು ಮಾತ್ರ ಸತ್ಯ. ಹೀಗಾಗಿ ಸ್ವೀಪ್ ಚಟುವಟಿಕೆಗಳು ಹೆಚ್ಚಾಗಿ ಗ್ರಾಮೀಣಕ್ಕಿಂತ ನಗರದಲ್ಲಿಯೇ ನಡೆಯುತ್ತಿದ್ದು, ಈ ಬಾರಿಯಾದರೂ ನಗರದ ಜನತೆ ಮತಗಟ್ಟೆಗೆ ದೌಡಾಯಿಸಿ ಬರುತ್ತಾರೆಯೋ ಕಾದು ನೋಡೋಣ.