ಸಾರಾಂಶ
ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷರಿಗೆ ತಲ್ಲೂರ್ಸ್ ಜಾನಪದ ರತ್ನ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಉಡುಪಿ
ಬಯಲು ಸೀಮೆಯ ಮೂಡಲಪಾಯ, ಉತ್ತರ ಕರ್ನಾಟಕದ ಶ್ರೀಕೃಷ್ಣ ಪಾರಿಜಾತ ಮೊದಲಾದ ಕಲಾಪ್ರಕಾರಗಳು ಸೂಕ್ತ ಪ್ರೋತ್ಸಾಹವಿಲ್ಲದೆ ಅಳಿವಿನಂಚಿನಲ್ಲಿವೆ. ಆದರೆ ಕರಾವಳಿಯ ಯಕ್ಷಗಾನ ಇಂದು ವಿಶ್ವದರ್ಜೆಯ ಕಲೆಯಾಗಿ ಮೆರೆಯುವಂತೆ ಮಾಡಿದ ಇಲ್ಲಿನ ವಿದ್ಯಾವಂತರು, ಕಲಾ ಪ್ರೋತ್ಸಾಹಕರು ಅಭಿನಂದನಾರ್ಹರು ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದ್ದಾರೆ.ಭಾನುವಾರ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಭೂಮಿಕಾ ಹಾರಾಡಿ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ‘ಬಣ್ಣ 11’ ಪಂಚದಿನ ನಾಟಕೋತ್ಸವದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಡ ಮಾಡುವ 2025ನೇ ಸಾಲಿನ ‘ತಲ್ಲೂರ್ಸ್ ಜಾನಪದ ರತ್ನ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ಕರಾವಳಿಯಲ್ಲಿ ನಾಟಕದ ಜೊತೆ ಯಕ್ಷಗಾನ ಕಲೆಯನ್ನು ಕೂಡಾ ಉಳಿಸಿಕೊಂಡು ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ಯುವಜನತೆಯನ್ನು ಈ ಕಲೆಗಳಲ್ಲಿ ತೊಡಗಿಸಿಕೊಂಡು ಮಾಡಿರುವಂತಹ ನಿಮ್ಮ ಕಲೆಯ ಮೇಲಿನ ಪ್ರೀತಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಪ್ರಶಸ್ತಿಯ ರೂವಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು, ಡಾ.ತಲ್ಲೂರು ಶಿವರಾಮ ಶೆಟ್ಟರು ಯಕ್ಷಗಾನ, ಜಾನಪದ, ನಾಟಕ ರಂಗಕ್ಕೆ ನೀಡುತ್ತಿರುವ ಕೊಡುಗೆ ಇತರರಿಗೆ ಮಾದರಿಯಾಗಿದೆ ಎಂದರು.ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ರೋಟರಿ ಪ್ರಮುಖ ಜ್ಞಾನವಸಂತ ಶೆಟ್ಟಿ ಶುಭ ಹಾರೈಸಿದರು. ಕ.ಜಾ. ಪರಿಷತ್ತಿನ ಸಂ. ಕಾರ್ಯದರ್ಶಿ ಗೋಪಾಲ ಸಿ.ಬಂಗೇರ, ಖಜಾಂಚಿ ಪ್ರಶಾಂತ್ ಭಂಡಾರಿ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಆರ್.ಎಂ. ಸಾಮಗ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನ ಟ್ರಸ್ಟಿಗಳಾದ ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಅನುಷಾ ಆಚಾರ್ಯ ಮತ್ತಿತರರಿದ್ದರು.
ಕ.ಜಾ. ಪರಿಷತ್ ಕಾರ್ಯದರ್ಶಿ ರವಿರಾಜ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿಕಾ ಹಾರಾಡಿ ಸಂಸ್ಥೆಯ ರವಿ ಎಸ್. ಪೂಜಾರಿ ಸ್ವಾಗತಿಸಿದರು. ಅಧ್ಯಕ್ಷ ರಾಮ ಶೆಟ್ಟಿ ವಂದಿಸಿದರು...............ಪ್ರಶಸ್ತಿ ಪ್ರದಾನದಲ್ಲಿ ಕರಾವಳಿಯ ಸೊಬಗುಪ್ರೊ.ಹಿ.ಚಿ.ಬೋರಲಿಂಗಯ್ಯ ಅವರಿಗೆ ಕರಾವಳಿಯ ಸಂಪ್ರದಾಯದಂತೆ ಅಕ್ಕಿಮುಡಿ, ಬಾಳೆಗೊನೆ, ಅಡಕೆ ಗೊನೆ, ಸಿಯಾಳ ಗೊನೆ, ಹಿಂಗಾರ, ವೀಳ್ಯದೆಲೆ ನೀಡಿ, ಬೆಳ್ಳಿಯ ಪ್ರಶಸ್ತಿ ಫಲಕ ಅರ್ಪಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಪತ್ನಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ ಅವರು ಮಲ್ಲಿಗೆ ಮುಡಿಸಿ, ಅರಶಿನ ಕುಂಕುಮ ಹಚ್ಚಿ, ಸೀರೆ ಕಾಣಿಕೆಯಾಗಿ ನೀಡಿದರು.