ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರು ಗಗನದಲ್ಲಿ ಸಾಹಸ ಮೆರೆದು ವಿಮಾನ ಪ್ರಯಾಣಿಕರನ್ನು ಉಳಿಸಿದ್ದಾರೆ. ಇವರ ಶೌರ್ಯವನ್ನುಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೊಂಡಾಡಿದ್ದಾರೆ. ಅನೇಕ ಜಾಗತಿಕ ನಾಯಕರು ಅಭಿನಂದಿಸಿದ್ದಾರೆ. ಸ್ಮಿತ್ ಸಾಹಸದ ಸ್ಮರಣಾರ್ಥ ನಮ್ಮಲ್ಲಿ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆಅವರ ಹೆಸರಿಟ್ಟು ಮುಂದಿನ ಪೀಳಿಗೆಗೆ ಅವರ ಸಾಹಸ ಪರಿಚಯಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಗಗನದಲ್ಲಿ ಸಂಭವಿಸಿದ ದೊಡ್ಡ ವಿಮಾನ ದುರಂತವೊಂದನ್ನು ತಪ್ಪಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಹೆಮ್ಮೆಯ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸವನ್ನು ವಿಶ್ವವೇ ಮೆಚ್ಚಿದೆ. ಈತನ ಧೈರ್ಯ ಯುವಜನರಿಗೆ ಪ್ರೇರಣೆಯಾಗಲಿ ಎಂದು ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನದ ಬಸವ ಮಹಾಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನ ನಾಗಸೇವಾ ದತ್ತಿ ಸಂಸ್ಥೆ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿ, ಸೆಪ್ಟಂಬರ್ 30ರಂದು ಫ್ಲೈ ದುಬೈ ಸಂಸ್ಥೆಯ ವಿಮಾನವು ಆಕಾಶದಲ್ಲಿ ಹಾರಾಡುತ್ತಿದ್ದಾಗ ಸಹ ಪೈಲಟ್ ಏಕಾಏಕಿ ದಾಳಿ ನಡೆಸಿ ಸ್ಮಿತ್ ಮಚ್ಚಾರ್‌ ಅವರಿಗೆ ಇರಿದಿದ್ದನು. ತೀವ್ರ ರಕ್ತಸ್ರಾವ ಹಾಗೂ ಗಾಯಗಳಾಗಿದ್ದರೂ ಧೃತಿಗೆಡದೆ ಕ್ಯಾಪ್ಟನ್ ಸ್ಮಿತ್ ತಾವೊಬ್ಬರೇ ವಿಮಾನವನ್ನು ಸುರಕ್ಷಿತವಾಗಿ ಇಸ್ರೇಲ್‌ನಲ್ಲಿ ಇಳಿಸುವ ಮೂಲಕ ನೂರಾರು ಜೀವ ಉಳಿಸಿ ವಿಶ್ವವೇ ಕೊಂಡಾಡುವಂತೆ ಮಾಡಿದ್ದಾರೆ ಎಂದರು.

ಇವರ ಸಮಯ ಪ್ರಜ್ಞೆ ಹಾಗೂ ಅದ್ಭುತ ಧೈರ್ಯದಿಂದಾಗಿ ವಿಮಾನದಲ್ಲಿದ್ದ 174 ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿಯ ಜೀವ ಉಳಿಯಿತು. ವಿಶ್ವವೇ ತಿರುಗಿ ನೋಡುವಂತಹ ಸಾಹಸ ಮಾಡಿದ ಸ್ಮಿತ್ ಅವರನ್ನು ವಿಶ್ವ ನಾಯಕರು ಅಭಿನಂದಿಸಿ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ಸ್ಮಿತ್ ಭಾರತೀಯ ಮೂಲದವರು ಎಂಬುದು ಭಾರತೀಯರು ಹೆಮ್ಮೆಪಡುವ ವಿಚಾರ ಎಂದು ಸ್ವಾಮೀಜಿ ಹೇಳಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರು ಗಗನದಲ್ಲಿ ಸಾಹಸ ಮೆರೆದು ವಿಮಾನ ಪ್ರಯಾಣಿಕರನ್ನು ಉಳಿಸಿದ್ದಾರೆ. ಇವರ ಶೌರ್ಯವನ್ನುಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೊಂಡಾಡಿದ್ದಾರೆ. ಅನೇಕ ಜಾಗತಿಕ ನಾಯಕರು ಅಭಿನಂದಿಸಿದ್ದಾರೆ. ಸ್ಮಿತ್ ಸಾಹಸದ ಸ್ಮರಣಾರ್ಥ ನಮ್ಮಲ್ಲಿ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆಅವರ ಹೆಸರಿಟ್ಟು ಮುಂದಿನ ಪೀಳಿಗೆಗೆ ಅವರ ಸಾಹಸ ಪರಿಚಯಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಇದೇ ವೇಳೆ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯದ ಉತ್ತಮ ಸ್ವಯಂಸೇವಾ ಪ್ರಶಸ್ತಿ ಪಡೆದ ನಗರದ ವಿದ್ಯೋದಯ ಕಾನೂನು ಕಾಲೇಜು ವಿದ್ಯಾರ್ಥಿ ಸಿದ್ಧೇಶ್ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಶಿವರಾಜು ಅವರ ಹೆಸರಿನಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಗೆ ಸಿದ್ಧೇಶ್ ಆಯ್ಕೆಯಾಗಿದ್ದರು. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಸಿದ್ದೇಶ್ ಅವರಿಗೆ ಈ ವೇಳೆ ನಾಗರಕಟ್ಟೆ ಗಣಪತಿ ದೇವಸ್ಥಾನ ನಾಗಸೇವಾ ದತ್ತಿ ವತಿಯಿಂದ ಸನ್ಮಾನಿಸಲಾಯಿತು.

ಮುಖಂಡರಾದ ಮಂಜು ಭಾರ್ಗವ್, ನಟರಾಜಶೆಟ್ಟಿ, ಗುರುರಾಘವೇಂದ್ರ, ಗೋಕುಲ್‌ರಾಜು, ಸುಮನ್ ಮೊದಲಾದವರು ಭಾಗವಹಿಸಿದ್ದರು.