ಸಾರಾಂಶ
ಬಳ್ಳಾರಿಯಿಂದ ಕುಟುಂಬ ಸಹಿತ ಕಾರಿನಲ್ಲಿ ಕರ್ನೂಲ್ ಬಳಿ ಗ್ರಾಮವೊಂದಕ್ಕೆ ಮದುವೆ ನಿಶ್ಚಯ ಕಾರ್ಯಕ್ಕೆ ಹೋಗುತ್ತಿರುವಾಗ ದುರ್ಘ ಟನೆ ಸಂಭವಿಸಿ, ಮೊಳಕಾಲ್ಮುರು ತಾಲೂಕಿನ ಬಿಜಿಕೆರೆಯ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ನೆರೆಯ ಆಂಧ್ರಪ್ರದೇಶದ ಕರ್ನೂಲ್ ಬಳಿ ಸೋಮವಾರ ಬೆಳಿಗಿನ ಜಾವ ನಡೆದ ಕಾರು ಅಪಘಾತದಲ್ಲಿ ತಾಲೂಕಿನ ಬಿಜಿಕೆರೆ ಗ್ರಾಮದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದ ಮೃತಪಟ್ಟವರನ್ನು ಅಬ್ದುಲ್ ರೆಹಮಾನ್ (38), ಆತನ ಪುತ್ರಿಯ ರಾದ ರೋಶಿನಿ (4) ಮತ್ತು ಭುರಾ (2) ಎಂದು ಗುರುತಿಸಲಾಗಿದೆ. ಅಬ್ದುಲ್ ರೆಹಮಾನ್ ನ ಪತ್ನಿ ಖದರುನ್ನೀಸಾ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.ಮೃತರು ಬಳ್ಳಾರಿಯಿಂದ ಕುಟುಂಬ ಸಹಿತ ಕಾರಿನಲ್ಲಿ ಕರ್ನೂಲ್ ಬಳಿ ಗ್ರಾಮವೊಂದಕ್ಕೆ ಮದುವೆ ನಿಶ್ಚಯ ಕಾರ್ಯ ಕ್ಕೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿ ಸಂಬಂಧಿಕರ ಪೈಕಿ ಇಬ್ಬರು, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದ ಮೃತ ಅಬ್ದುಲ್ ರೆಹಮಾನ್ ಬಿ.ಜಿ.ಕೆರೆಯಲ್ಲಿ ಚಿಕ್ಕದೊಂದು ಮೆಕಾನಿಕ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಹೆಂಡತಿ ತಮ್ಮನ ಮದುವೆ ನಿಶ್ಚಯಕ್ಕೆ ಖುಷಿಯಿಂದ ಭಾನುವಾರ ಮಧ್ಯಾಹ್ನ ಇಲ್ಲಿಂದ ಹೋಗಿದ್ದರು. ಆದರೆ ದುರದೃಷ್ಟ ಈಗ ಹೆಣವಾಗಿ ವಾಪಾಸ್ಸಾಗಿದ್ದಾರೆ. ಒಂದೇ ಕುಟುಂಬದ ಮೂವರು ಸಾವಿನಿಂದಾಗಿ ಬಿಜಿಕೆರೆ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಕುಟುಂಬಸ್ಥರನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮನ ಕಲುಕುವಂತೆ ಕಂಡು ಬಂತು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಜೆ ಸ್ವಗ್ರಾಮ ಬಿಜಿಕೆರೆಗೆ ತರಲಾಗಿದೆ.