ಸಾರಾಂಶ
ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಲಭಾಗದ ರಸ್ತೆಗೆ ಹಾರಿಬಿದ್ದು ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಸಿಲುಕಿದ ಪರಿಣಾಮ ಕಾರಿನಲ್ಲಿದ್ದ ಆರೂ ಜನರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಈಚನಹಳ್ಳಿಯ ಕಂದಲಿ ಬಳಿ ಭಾನುವಾರ ಮುಂಜಾನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75ರ ಕಂದಲಿ ಬಳಿ ಭೀಕರ ಅಪಘಾತ । ಮಂಗಳೂರಿನಲ್ಲಿ ಸಂಬಂಧಿಗೆ ಚಿಕಿತ್ಸೆ ಕೊಡಿಸಿ ಬರುತ್ತಿದ್ದ ಕುಟುಂಬ
ಕನ್ನಡಪ್ರಭ ವಾರ್ತೆ ಹಾಸನನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಲಭಾಗದ ರಸ್ತೆಗೆ ಹಾರಿಬಿದ್ದು ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಸಿಲುಕಿದ ಪರಿಣಾಮ ಕಾರಿನಲ್ಲಿದ್ದ ಆರೂ ಜನರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಈಚನಹಳ್ಳಿಯ ಕಂದಲಿ ಬಳಿ ಭಾನುವಾರ ಮುಂಜಾನೆ ನಡೆದಿದೆ.
ಬಾಲಕ ಚೇತನ್ (5), ಸುನಂದಾ (40), ನೇತ್ರಾ (30), ರವಿಕುಮಾರ್, ನಾರಾಯಣಪ್ಪ (55) ಹಾಗೂ ಕಾರು ಚಾಲಕ ರಾಕೇಶ್ (35) ಮೃತರು. ನಾರಾಯಣಪ್ಪ ಮತ್ತು ಸುನಂದಾ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದವರು. ರವಿಕುಮಾರ್, ನೇತ್ರಾ ಮತ್ತು ಬಾಲಕ ಚೇತನ್ ಹೊಸಕೋಟೆ ತಾಲೂಕಿನ ಅಂದರಹಳ್ಳಿ ನಿವಾಸಿಗಳು. ಚಾಲಕ ರಾಕೇಶ್ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಂಡೇನಹಳ್ಳಿ ನಿವಾಸಿ. ಸ್ಥಳಕ್ಕೆ ಎಸ್‌ಪಿ ಮಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲಿಸಿದರು.ಎಷ್ಟೋ ಸಮಯದ ಬಳಿಕ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ದಾರಿಹೋಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ನಂತರ ಜೆಸಿಬಿ ಮೂಲಕ ಅಪಘಾತವಾದ ವಾಹನವನ್ನು ತೆರವುಗೊಳಿಸಲಾಯಿತು.ಏನಿದು ಘಟನೆ?
ನಾರಾಯಣಪ್ಪ ಅವರು ಕುಟುಂಬ ಸಮೇತವಾಗಿ ಟೊಯೋಟಾ ಇಟಿಯೋಸ್ ಕಾರಿನಲ್ಲಿ ಮಂಗಳೂರಿನಿಂದ ತಮ್ಮ ಊರಿಗೆ ವಾಪಸಾಗುತ್ತಿದ್ದರು. ತಮ್ಮ ಸಂಬಂಧಿ ಗೋವಿಂದಪ್ಪ ಎಂಬುವವರಿಗೆ ಮಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಅವರನ್ನು ನೋಡಿಕೊಂಡು ವಾಪಸ್ ಬರುತ್ತಿದ್ದಾಗ ಮುಂಜಾನೆ 5.30 ರ ಸುಮಾರಿನಲ್ಲಿ ನಿದ್ದೆಯ ಮಂಪರಿನಲ್ಲಿದ್ದ ಚಾಲಕನಿಂದ ವೇಗವಾಗಿದ್ದ ಕಾರು ರಸ್ತೆ ಮಧ್ಯದ ವಿಭಜಕಕ್ಕೆ ತಾಕಿ ನಿಯಂತ್ರಣ ಕಳೆದುಕೊಂಡಿದೆ. ಕಾರು ವೇಗವಾಗಿದ್ದರಿಂದ ಕಾರು ಹಾರಿ ಬಲಭಾಗದ ರಸ್ತೆಗೆ ನುಗ್ಗಿದೆ. ಇದೇ ವೇಳೆಗೆ ಬಲಭಾಗದ ರಸ್ತೆಯಲ್ಲಿ ಬರುತ್ತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ೬ ಜನರ ದೇಹ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.