ಸ್ಕೂಟರ್‌ಗೆ ಡಿಕ್ಕಿ ಹೊಡೆದು ಹೋಟೆಲ್‌ಗೆ ನುಗ್ಗಿದ ಕಾರು; ತಪ್ಪಿದ ದುರಂತ

| Published : Jun 02 2024, 01:46 AM IST

ಸ್ಕೂಟರ್‌ಗೆ ಡಿಕ್ಕಿ ಹೊಡೆದು ಹೋಟೆಲ್‌ಗೆ ನುಗ್ಗಿದ ಕಾರು; ತಪ್ಪಿದ ದುರಂತ
Share this Article
  • FB
  • TW
  • Linkdin
  • Email

ಸಾರಾಂಶ

ಅಪಘಾತದಿಂದ ಹೋಟೆಲ್‌ಗೆ ಹಾನಿಯಾಗಿದ್ದು ಹೋಟೆಲ್ ಹೊರಗಡೆ ಇಟ್ಟಿದ್ದ ತಂಪು ಪಾನೀಯದ ಬಾಟಲಿಗಳು ಒಡೆದು ಹೋಗಿವೆ.

ಕನ್ನಡಪ್ರಭ ವಾರ್ತೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಬಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ 11 ಗಂಟೆಗೆ ಕಾರೊಂದು ಸ್ಕೂಟರ್‌ಗೆ ಡಿಕ್ಕಿಯಾಗಿ ಹೆದ್ದಾರಿ ಬದಿಯ ಹೋಟೆಲ್‌ಗೆ ನುಗ್ಗಿದ್ದು ಹೋಟೆಲ್ ಮುಚ್ಚಿದ್ದರಿಂದ ಭಾರಿ ಅಪಾಯ ತಪ್ಪಿದೆ. ಅಪಘಾತದಲ್ಲಿ ಸ್ಕೂಟರ್ ಸವಾರ ಕಿನ್ನಿಗೋಳಿ ಸಮೀಪದ ಬಟ್ಟಕೋಡಿಯಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಮೂಲ್ಕಿ ನಿವಾಸಿ ಮನೋಜ್(34) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಚಾಲಕ ಸಹಿತ ಉಡುಪಿ ಜಿಲ್ಲೆಯ ಉಚ್ಚಿಲ ಮೂಲದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಮೂಲ್ಕಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರನ್ನು ಎಳೆದುಕೊಂಡು ಹೋಗಿ ಹೆದ್ದಾರಿ ಬದಿಯ ಸರ್ವಿಸ್ ರಸ್ತೆ ದಾಟಿ ಹೋಟೆಲ್ ಒಳಗೆ ನುಗ್ಗಿದೆ. ಈ ಸಂದರ್ಭ ಸ್ಕೂಟರ್ ಸವಾರ ಮನೋಜ್‌ಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರಾದ ಗಣೇಶ್, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮತ್ತಿತರರು ಸೇರಿ ಆಟೋದಲ್ಲಿ ಗಾಯಾಳುವನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಸಂದರ್ಭ ಲಲಿತ್ ಮಹಲ್ ಕಟ್ಟಡದ ಮಾಲಕ ಅವಿನಾಶ್ ತಮ್ಮ ಹೋಟೆಲ್‌ಗೆ ಬೀಗ ಹಾಕಿ ಬರುತ್ತಿದ್ದು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಕಾರು ನುಗ್ಗಿದ ಸ್ಥಳದಲ್ಲಿ ಹೂವಿನ ಅಂಗಡಿ ಹಾಗೂ ವಿದ್ಯುತ್ ಕಂಬವಿದ್ದು, ಜನ ನಿಬಿಡ ಪ್ರದೇಶವಾಗಿರುವುದರಿಂದ ಅಪಘಾತ ರಾತ್ರಿ ಹೊತ್ತು ನಡೆದ ಕಾರಣ ಭಾರಿ ಅಪಾಯ ತಪ್ಪಿದೆ.

ಅಪಘಾತದಿಂದ ಹೋಟೆಲ್‌ಗೆ ಹಾನಿಯಾಗಿದ್ದು ಹೋಟೆಲ್ ಹೊರಗಡೆ ಇಟ್ಟಿದ್ದ ತಂಪು ಪಾನೀಯದ ಬಾಟಲಿಗಳು ಒಡೆದು ಹೋಗಿವೆ. ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಹಾಗೂ ಹೆದ್ದಾರಿ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು ಕಾರನ್ನು ಸ್ಥಳದಿಂದ ತೆರೆವುಗೊಳಿಸಲಾಗಿದೆ.

ಬೈಕ್- ಲಾರಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವುಬೆಳ್ತಂಗಡಿ: ಹಳೆಕೋಟೆ ಬಳಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆಬೆಳ್ತಂಗಡಿ ಕಸಬಾ ಹಳೆಕೋಟೆ ಬಳಿ ಪೆಟ್ರೋಲ್ ಪಂಪ್ ಬಳಿ ಮಣ್ಣು ಹೇರಿಕೊಂಡು ಹೋಗುತ್ತಿದ್ದ ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಮಚ್ಚಿನ ಗ್ರಾಮದ ಕೃಷಿಕ ವಿನೋದ್ ಗೌಡ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ತಾಲೂಕಿನಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ.