ಸಾರಾಂಶ
ನಾಲ್ಕೈದು ದಿನಗಳ ಸುದೀರ್ಘ ರಜೆಗಳ ಹಿನ್ನೆಲೆ ಖಾಸಗಿ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಹೊರಟಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು, ಉರಿದು ಕರಕ ಲಾಗಿದ್ದು, ಅದರಲ್ಲಿದ್ದ ಐವರು ಪವಾಡ ಸದೃಶ ರೀತಿ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-48ರ ಕುಂದುವಾಡ ಗ್ರಾಮದ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.
ಪವಾಡ ರೀತಿ ಲೋಕಾ ಇನ್‌ಸ್ಪೆಕ್ಟರ್, ಇತರ ನಾಲ್ವರು ಪಾರು
ದಾವಣಗೆರೆ: ನಾಲ್ಕೈದು ದಿನಗಳ ಸುದೀರ್ಘ ರಜೆಗಳ ಹಿನ್ನೆಲೆ ಖಾಸಗಿ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಹೊರಟಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು, ಉರಿದು ಕರಕ ಲಾಗಿದ್ದು, ಅದರಲ್ಲಿದ್ದ ಐವರು ಪವಾಡ ಸದೃಶ ರೀತಿ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-48ರ ಕುಂದುವಾಡ ಗ್ರಾಮದ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.ಮಂಡ್ಯ ಲೋಕಾಯುಕ್ತ ಇನ್‌ಸ್ಪೆಕ್ಟರ್ ಹನುಮಂತಪ್ಪ, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಶೀಘ್ರ ಲಿಪಿಕಾರ ಪ್ರಮೋದ್, ಮದ್ದೂರು ಪುರಸಭೆ ಸದಸ್ಯ ಸಿದ್ದರಾಜು, ಉದ್ಯಮಿ ಚೇತನ್ ಹಾಗೂ ಕೆಎಸ್ಸಾರ್ಟಿಸಿ ಬಸ್ಸು ಚಾಲಕ ಕೃಷ್ಣಪ್ಪ ಅಪಾಯದಿಂದ ಪಾರಾಗಿದ್ದಾರೆ.
ಮಂಡ್ಯದಿಂದ ಐವರು ಮಾರುತಿ ಬ್ರಿಝಾ ಕಾರಿನಲ್ಲಿ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿದ್ದರು. ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಕುಂದುವಾಡ ಸಮೀಪ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.ತಕ್ಷಣ ಚಾಲಕ ಹೆದ್ದಾರಿ ಪಕ್ಕಕ್ಕೆ ಕಾರು ನಿಲ್ಲಿಸಿದ್ದಾನೆ ಕಾರಿನಲ್ಲಿದ್ದ ಐದೂ ಜನರು ಕೆಳಗಿಳಿದು, ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಇಡೀ ಕಾರು ಬೆಂಕಿ ಕೆನ್ನಾಲಿಗೆ ತುತ್ತಾಗಿದೆ.ತಕ್ಷಣವೇ ವಿಷಯ ತಿಳಿದು ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿತು. ಆದರೆ ಅಷ್ಟರಲ್ಲಿ ಬೆಂಕಿ ಸಂಪೂರ್ಣ ಕಾರನ್ನು ಸುಟ್ಟು ಕರಕಲಾಗಿಸಿತ್ತು. ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ ನಲವಾಗಲು, ಅಧಿಕಾರಿ, ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.