ಮಣಿಪಾಲ ಮಾಹೆಯಲ್ಲಿ 12.84 ಕೋಟಿ ವೆಚ್ಚದ ಸಿಎಆರ್ ಆರಂಭ

| Published : Oct 08 2025, 01:01 AM IST

ಮಣಿಪಾಲ ಮಾಹೆಯಲ್ಲಿ 12.84 ಕೋಟಿ ವೆಚ್ಚದ ಸಿಎಆರ್ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯಿಂದ 12.84 ಕೋಟಿ ರು. ಅನುದಾನದಲ್ಲಿ ಆರಂಭಿಸಲಾಗಿರುವ ಈ ಕೇಂದ್ರಕ್ಕೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಇದರ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಪ್ರಾಧ್ಯಾಪಕರಾದ ಡಾ. ನವೀನ್ ಸಾಲಿನ್ಸ್ ಅವರು ಮುಖ್ಯಸ್ಥರಾಗಿ ಮತ್ತು ಡಾ. ಅರುಣ್ ಘೋಷಾಲ್ ಸಹಾಯಕರಾಗಿರುತ್ತಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪಿಟ್ ಕೇಂದ್ರ (ಎಂಎಚ್‌ಆರ್‌ಸಿ)ದಲ್ಲಿ ನೂತನ ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ (ಸಿಎಆರ್)ನ್ನು ಮಂಗಳವಾರ ಉದ್ಘಾಟಿಸಲಾಯಿತು.ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯಿಂದ 12.84 ಕೋಟಿ ರು. ಅನುದಾನದಲ್ಲಿ ಆರಂಭಿಸಲಾಗಿರುವ ಈ ಕೇಂದ್ರಕ್ಕೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಇದರ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಪ್ರಾಧ್ಯಾಪಕರಾದ ಡಾ. ನವೀನ್ ಸಾಲಿನ್ಸ್ ಅವರು ಮುಖ್ಯಸ್ಥರಾಗಿ ಮತ್ತು ಡಾ. ಅರುಣ್ ಘೋಷಾಲ್ ಸಹಾಯಕರಾಗಿರುತ್ತಾರೆ. ಭಾರತೀಯ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಅಂತರವನ್ನು ತುಂಬುವುದು ಸಿಎಆರ್‌ನ ಗುರಿಯಾಗಿದೆ. ತೀವ್ರ ನಿಗಾ ಘಟಕಗಳಲ್ಲಿ ದಾಖಲಾಗಿರುವ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೈತಿಕ, ಸಹಾನುಭೂತಿ ಮತ್ತು ಪುರಾವೆ ಆಧಾರಿತ ಬಹುಮುಖಿ ಸಮಗ್ರ ಆರೈಕೆ ಪ್ಯಾಕೇಜನ್ನು ಸಿಎಆರ್ ಅಭಿವೃದ್ಧಿಪಡಿಸುತ್ತದೆ. ಸಿಎಆರ್ ಮುಂದೆ 10 ಕ್ಲಿನಿಕಲ್ ಕೇಂದ್ರ ಮತ್ತು 7 ತಾಂತ್ರಿಕ ಪಾಲುದಾರರನ್ನೊಳಗೊಂಡ ಬಹುಕೇಂದ್ರ ಸಹಯೋಗ ಜಾಲವನ್ನು ಸ್ಥಾಪಿಸುತ್ತದೆ. ಈ ಕೇಂದ್ರದ ಕಾರ್ಯವು ಔಷಧ, ನರ್ಸಿಂಗ್, ಬಯೋಎಥಿಕ್ಸ್, ಆರೋಗ್ಯ ಅರ್ಥಶಾಸ್ತ್ರ, ಕಾನೂನು ಮತ್ತು ಸಾರ್ವಜನಿಕ ಆರೋಗ್ಯ ಸೇರಿದಂತೆ ಬಹು ವಿಭಾಗಗಳನ್ನು ವ್ಯಾಪಿಸಿದೆ. ಎಂದು ಮಾಹೆ ತಿಳಿಸಿದೆ.ಈ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಬಲ್ಲಾಳ್ ಮಾತನಾಡಿ, ಐಸಿಎಂಆರ್‌ನೊಂದಿಗಿನ ಪಾಲುದಾರಿಕೆಯು ಮಾಹೆಯ ಸಂಶೋಧನಾ ಸಂಸ್ಕೃತಿಗೆ ಅತ್ಯುನ್ನತ ಮಟ್ಟದ ರಾಷ್ಟ್ರೀಯ ಮನ್ನಣೆಯಾಗಿದೆ. ಈ ಮನ್ನಣೆಯು ಮಾಹೆಯ ವಿಜ್ಞಾನ ಮತ್ತು ಸಂಶೋಧನೆಗೆ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದುಹೇಳಿದರು.ಈ ಸಂದರ್ಭಲ್ಲಿ ಐಸಿಎಂಆರ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಆಶೂ ಗ್ರೋವರ್ ಮತ್ತು ವಿಜ್ಞಾನಿ ಡಾ. ರೂಪಾ ಶಿವಶಂಕರ್ ಭಾಗವಹಿಸಿದ್ದರು. ಸಹ ಕುಲಪತಿ ಡಾ. ಶರತ್ ಕೆ. ರಾವ್ ಕಾರ್ಯಕ್ರಮ ಆಯೋಜಿಸಿದ್ದರು. ಕೆಎಂಸಿ ಮಣಿಪಾಲ್ ಡೀನ್ ಡಾ. ಅನಿಲ್ ಕೆ. ಭಟ್ ಮತ್ತು ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ. ಚೆರಿಯನ್ ವರ್ಗೀಸ್ ಉಪಸ್ಥಿತರಿದ್ದರು.