ಸಾರಾಂಶ
ಗದಗ: ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಿ, ಪರಿಸರ ಸಂರಕ್ಷಣೆಯ ಕಾರ್ಯ ಕೈಗೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ ಹೇಳಿದರು.
ನಗರದ ಸಿ.ಡಿ.ಓ ಜೈನ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪರಿಸರ ಸಂರಕ್ಷಣೆಗೆ ಸಾಕಷ್ಟು ಜಾಥಾ ಹಮ್ಮಿಕೊಳ್ಳಲಾಗಿದ್ದು, ಪ್ರತಿ ತಾಲೂಕಿಗೆ 10 ಸಾವಿರ ಸಸಿ ನೆಡಲು ಆದೇಶಿಸಲಾಗಿದ್ದು, ನಾವು ವಾಸಿಸುವ ಸ್ಥಳ ಸ್ವಚ್ಛವಾಗಿಟ್ಟರೆ ದೇಶ ಸ್ವಚ್ಛವಾಗಿ ಸುಂದರವಾಗುತ್ತದೆ. ಪರಿಸರ ಸಂರಕ್ಷಣೆಯಿಂದ ಆಹಾರ ಸುರಕ್ಷತೆ, ಜಲ ಸುರಕ್ಷತೆ, ಮನುಷ್ಯನ ಆರೋಗ್ಯ, ಆರ್ಥಿಕ ಬೆಳವಣಿಗೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಕ್ಕಳಿಗೆ ಶಿಕ್ಷಣ, ಉದ್ಯೋಗದ ಕುರಿತು ಯೋಚಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಉಸಿರಾಡಲು ಶುದ್ಧ ಗಾಳಿ, ಶುದ್ಧ ಕುಡಿಯುವ ನೀರು ಸೇರಿದಂತೆ ಸಮೃದ್ಧ ಪರಿಸರ ನಿರ್ಮಾಣಕ್ಕೆ ಸಹ ಯೋಚಿಸಬೇಕಾಗಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಗದೀಶ ಐ.ಎಚ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯ ಮಹತ್ವ ಹಾಗೂ ವಿಶ್ವ ಪರಿಸರ ದಿನಾಚರಣೆಯ ಈ ವರ್ಷದ ಘೋಷಣೆಯಾದ ಮರುಸ್ಥಾಪನೆ, ಮರು ಭೂಮೀಕರಣ ತಡೆಯುವಿಕೆ ಹಾಗೂ ಬರ ತಡೆಯುವಿಕೆ ಕುರಿತು ವಿವರಿಸಿದರು.ಸೌರವ್ಯೂಹದಲ್ಲಿ ಭೂಮಿ ಬಿಟ್ಟರೆ ಬೇರೆ ಕಡೆ ವಾಸಿಸಲು ಸಾಧ್ಯವಿಲ್ಲ, ವನ್ಯ ಜೀವಿಗಳ ಸಂರಕ್ಷಣೆ ಅಗತ್ಯವಾಗಿದ್ದು, ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬ ಪ್ರಜೆಯ ಪಾಲು ಅವಶ್ಯಕತೆವಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪ ಪರಿಸರ ಅಧಿಕಾರಿ ಲೋಹಿತ್ ಕುಮಾರ್. ಪಿ.ಜಿ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಹಟ್ಟಿ ನಿರೂಪಿಸಿದರು. ಅಶೋಕ ಅರಳಿ ವಂದಿಸಿದರು.