ವೃತ್ತಿ ಮಾರ್ಗದರ್ಶನ, ಕೌಶಲ್ಯ ಶಿಕ್ಷಣ ರಾಜ್ಯಾದ್ಯಂತ ವಿಸ್ತರಣೆ

| Published : Oct 16 2024, 12:34 AM IST

ಸಾರಾಂಶ

ರಾಜ್ಯ ಸರ್ಕಾರವು ಕೋಟಿಗಟ್ಟಲೇ ವೆಚ್ಚ ಮಾಡಿ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಗುಣಮಟ್ಟದ ಶಿಕ್ಷಕರಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಿಗೆ ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ ಎಂಬ ಕೊರಗಿದೆ.

ಧಾರವಾಡ:

ಸರ್ಕಾರಿ ಶಾಲಾ ಮಕ್ಕಳಿಗೆ ಸಮಗ್ರ ವೃತ್ತಿ ಮಾರ್ಗದರ್ಶನ, ಕಂಪ್ಯೂಟರ್‌ ಕೌಶಲ್ಯ ಮತ್ತು ಡಿಜಿಟಲ್‌ ಶಿಕ್ಷಣ ಒದಗಿಸುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲ್ಲಿಯ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯು ವಿವಿಧ ಖಾಸಗಿ ಕಂಪನಿಗಳ ಜತೆಗೆ ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ಸರ್ಕಾರಿ ಶಾಲೆಗಳಲ್ಲಿ ಸಿಎಸ್‌ಆರ್‌ ಅನುದಾನದ ಅಡಿ ನಡೆಸುತ್ತಿರುವ ವೃತ್ತಿ ಮಾರ್ಗದರ್ಶನ ಮತ್ತು ಕೌಶಲ್ಯ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಸಚಿವರು, ಸದ್ಯ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳ 2400 ಸರ್ಕಾರಿ ಶಾಲೆಗಳ ನಾಲ್ಕು ಲಕ್ಷಕ್ಕೂ ಹೆಚ್ಚು ಮಕ್ಕಳು ವಿವಿಧ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಅನುದಾನ ಬಳಕೆ ಮಾಡಿ ಈ ಸೌಲಭ್ಯ ಪಡೆಯುತ್ತಿದ್ದು, ಬರುವ ದಿನಗಳಲ್ಲಿ ರಾಜ್ಯದ ಎಲ್ಲ ಶಾಲೆಗಳ ಮಕ್ಕಳಿಗೆ ಈ ಸೌಲಭ್ಯ ನೀಡಲಾಗುವುದು ಎಂದರು.

ರಾಜ್ಯ ಸರ್ಕಾರವು ಕೋಟಿಗಟ್ಟಲೇ ವೆಚ್ಚ ಮಾಡಿ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಗುಣಮಟ್ಟದ ಶಿಕ್ಷಕರಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಿಗೆ ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ ಎಂಬ ಕೊರಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಸಹ ಪ್ರಾರಂಭ ಮಾಡಲಾಗುತ್ತಿದೆ. ಮಕ್ಕಳಿಗೆ ಶಿಕ್ಷಣ ನೀಡುವುದು ಪವಿತ್ರ ಕೆಲಸ. ಈ ನಿಟ್ಟಿನಲ್ಲಿ ಶಿಕ್ಷಕರು ಈ ವಿಷಯದಲ್ಲಿ ಯಾವುದೇ ರಾಜಿಯಾಗಿದೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಮನವಿ ಮಾಡಿದರು.

ಇಂಡಿಯಾ ಲಿಟರಸಿ ಪ್ರೊಜೆಕ್ಟ್‌ನ ಕಾರ್ಯದರ್ಶಿ ಪ್ರಮೋದ ಶ್ರೀಧರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಅಗತ್ಯ ಮತ್ತು ಶಿಕ್ಷಕರ ಸಾಮರ್ಥ್ಯಗಳಿಗೆ ಅನುಗುಣವಾಗಿ ವೃತ್ತಿ ಮಾರ್ಗದರ್ಶನ, ಡಿಜಿಟಲ್‌ ಶಿಕ್ಷಣವನ್ನು ವಿನ್ಯಾಸಗೊಳಿಸಿ ಸದ್ಯ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳ ಶಾಲಾ ಮಕ್ಕಳಿಗೆ ನೀಡುತ್ತಿದೆ. ಇದಕ್ಕೆ ವಿವಿಧ ಕಂಪನಿಗಳು ಸಿಎಸ್‌ಆರ್‌ ಅನುದಾನ ಒದಗಿಸಿವೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ವಯಂ ಅರಿವು, ಅವರ ಆಸಕ್ತಿ ಮತ್ತು ಕೌಶಲ್ಯಗಳಿಗೆ ಸರಿಹೊಂದುವ ವೃತ್ತಿ ಆಯ್ಕೆಗೆ ಸಹಾಯ ಮಾಡಲು ತಂತ್ರಗಳನ್ನು ಹಾಗೂ ಸಂಪನ್ಮೂಲವನ್ನು ನಾವು ಒದಗಿಸಿದ್ದು ಮಕ್ಕಳು ಸಹ ಅದೇ ರೀತಿ ಸಿದ್ಧರಾಗುತ್ತಿದ್ದಾರೆ. ಆರಂಭದಲ್ಲಿ ಕಂಪ್ಯೂಟರ್‌ ಸಮಸ್ಯೆ, 30 ಟೂಲ್ಸ್‌ನ್ನು ಶಿಕ್ಷಕರು ಕಲಿತು ಮಕ್ಕಳಿಗೆ ಹೇಳುವುದು ಹಾಗೂ ಟೂಲ್ಸ್ ಬಳಸಿ ವಿಷಯಗಳನ್ನು ಅರಿವುದು ಮಕ್ಕಳಿಗೆ ಸವಾಲಾಗಿದ್ದು ನಂತರಲ್ಲಿ ಸವಾಲುಗಳಿಗೆ ಪರಿಹಾರ ದೊರೆಯಿತು. ಸದ್ಯ ಶಿಕ್ಷಕರಿಗಿಂತ ಮಕ್ಕಳು ಬಹುಬೇಗ ಡಿಜಿಟಲ್‌ ಶಿಕ್ಷಣವನ್ನು ಕಲಿತಿದ್ದಾರೆ. ಜತೆಗೆ ಭವಿಷ್ಯದಲ್ಲಿ ತಾವು ಏನಾಗಬೇಕು ಎಂಬ ಆತ್ಮವಿಶ್ವಾಸ ಸಹ ಹೊಂದಿದ್ದಾರೆ ಎಂದರು.

ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಸ್ವಾಗತಿಸಿದರು. ರಾಜ್ಯ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕ ರಮೇಶ ಕೆ.ಎನ್‌., ಕಾಗ್ನಿಜೆಂಟ್‌ ಫೌಂಡೇಶನ್‌ ಸಿಇಒ ದೀಪಕ ಪ್ರಭು ಮಟ್ಟಿ ಹಾಗೂ ಕಲಬುರ್ಗಿ ಹಾಗೂ ಬೆಳಗಾವಿ ವಿಭಾಗದ ಡಿಡಿಪಿಐ, ಬಿಇಒ ಸೇರಿದಂತೆ ಶಿಕ್ಷಣಾಧಿಕಾರಿಗಳು ಇದ್ದರು.

ತಾವು ಶಿಕ್ಷಣ ಸಚಿವರಾದ ನಂತರ ಖಾಲಿ ಇರುವ ಸಾವಿರಾರು ಶಿಕ್ಷಕರ ಹುದ್ದೆಗಳನ್ನು ತುಂಬಿದ್ದೇನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಡೆಯುತ್ತಿದ್ದ ನಕಲು ತಡೆಯಲು ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ತಂದಿದ್ದೇನೆ. ಅನುತ್ತೀರ್ಣರಾದ ಮಕ್ಕಳಿಗೆ ಮೂರು ಬಾರಿ ಪರೀಕ್ಷೆಗೆ ಅವಕಾಶ ನೀಡಿದ್ದೇನೆ. ಹತ್ತಾರು ವರ್ಷಗಳಿಂದ ಕಲ್ಯಾಣ ಕರ್ನಾಟಕದಿಂದ ಬೇರೆಡೆ ವರ್ಗವಾಗದೇ ಉಳಿದ ಶಿಕ್ಷಕರ ವರ್ಗಾವಣೆ ಮಾಡಿದ್ದೇನೆ. ಕೆಲವು ಸಂದರ್ಭದಲ್ಲಿ ತಮ್ಮ ಕ್ರಮಕ್ಕೆ ವಿರೋಧ ವ್ಯಕ್ತವಾದರೂ ಮಕ್ಕಳ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇನೆ ಎಂದು ನಂಬಿದ್ದೇನೆ ಎಂದು ಸಚಿವರು ಹೇಳಿದರು.