ಸಾರಾಂಶ
ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಲಹೆ, ಪ್ರತಿ 6 ತಿಂಗಳಿಗೊಮ್ಮೆ ಮೇಳ ಆಯೋಜನೆ
ಕನ್ನಡಪ್ರಭ ವಾರ್ತೆ ದಾವಣಗೆರೆಪ್ರಸ್ತುಪ ಸ್ಪರ್ಧಾತ್ಮಕ ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿ, ಯುವ ಜನರು ಔದ್ಯೋಗಿಕ ಕ್ಷೇತ್ರಕ್ಕೆ ಅಗತ್ಯ ವೃತ್ತಿ ನೈಪುಣ್ಯತೆ, ಕೌಶಲ್ಯಗಳ ಮೈಗೂಡಿಸಿ ಉತ್ತಮ ಅವಕಾಶಗಳ ತಮ್ಮದಾಗಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕರೆ ನೀಡಿದರು.
ನಗರದ ಹೈಸ್ಕೂಲ್ ಮೈದಾನದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಹತೆಯೊಂದಿಗೆ ವೃತ್ತಿ ನೈಪುಣ್ಯತೆ, ಕೌಶಲ್ಯಗಳೂ ಅತ್ಯಗತ್ಯ ಎಂದರು.ಜಗತ್ತಿನ 2ನೇ ಅತೀ ದೊಡ್ಡ ಜನಸಂಖ್ಯೆಯ ದೇಶ ಭಾರತ ಜಿಡಿಪಿಯಲ್ಲಿ 5ನೇ ಸ್ಥಾನದಲ್ಲಿದೆ. ಆದರೂ, ಇಲ್ಲಿ ನಿರುದ್ಯೋಗ ಪ್ರಮಾಣವೇ ಚರ್ಚಿತ ವಿಷಯ. ದೇಶದಲ್ಲಿ ಯುವ ಜನತೆ ಪ್ರಮಾಣ ಹೆಚ್ಚಾಗಿದೆ. ವಿದೇಶಗಳ ಕಂಪನಿಗಳು ಇಲ್ಲಿನ ಯುವ ಮಾನವ ಸಂಪನ್ಮೂಲ, ಇಲ್ಲಿನ ಉತ್ಪಾದಕತೆ, ಖರೀದಿ ಸಾಮರ್ಥ್ಯ ಹೆಚ್ಚಾಗಿರುವುದನ್ನು ಗ್ರಹಿಸಿಯೇ, ಬಂಡವಾಳ ಹೂಡಲು ಆಸಕ್ತಿ ತೋರುತ್ತಿವೆ. ಹಾಗಾಗಿ ನಮ್ಮ ವಿದ್ಯಾರ್ಥಿ, ಯುವಜನರು ವೃತ್ತಿ ನೈಪುಣ್ಯತೆ, ತಂತ್ರಜ್ಞಾನ, ಕೌಶಲ್ಯ ಹೆಚ್ಚಿಸಿಕೊಳ್ಳಬೇಕಿದೆ ಎಂದು ಹೇಳಿದರು.
ದೀನ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆ ಜಾರಿಗೊಳಿಸಿ, ಗ್ರಾಮೀಣ ಯುವ ಜನರಿಗೆ ಕೌಶಲ್ಯ ತರಬೇತಿ ಕಲ್ಪಿಸುವ ಮೂಲಕ ಉದ್ಯೋಗ ದೊರಕಿಸುವ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಇನ್ನು ಪ್ರತಿ 6 ತಿಂಗಳಿಗೊಮ್ಮೆ ಉದ್ಯೋಗ ಮೇಳ ಆಯೋಜಿಸಲಾಗುವುದು. ಈ ಮೂಲಕ ಸ್ಥಳದಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಲಾಗುವುದು. ಎಸ್‌ವಿ ಇಂಡಿಯಾನ್ ಕಂಪನಿ, ಸರ್ವೇ ಇಂಡಿಯಾನ್ ಕಂಪನಿ, ವಿಶ್ರಾ ಕಂಪನಿಗಳಿಂದ ಅನೇಕರಿಗೆ ಆಫರ್ ಲೆಟರ್(ಒಪ್ಪಿಗೆ ಪತ್ರ) ಸಹ ನೀಡುತ್ತಿದ್ದೇವೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ಉದ್ಯೋಗ ಮೇಳ ಆಯೋಜಿಸುವ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರವರಿಗೆ ಸ್ಪಂದಿಸಿದ್ದಕ್ಕೆ ಜಿಲ್ಲಾ ಆಡಳಿತದಿಂದ ಅಭಿನಂದಿಸುತ್ತೇವೆ. ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯ, ನೈಪುಣ್ಯತೆ, ತಂತ್ರಜ್ಞಾನ ಮೈಗೂಡಿಸಿ, ಅಪ್‌ಡೇಟ್ ಆಗಬೇಕು. ದಿನದಿನಕ್ಕೂ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿದ್ದು, ಜ್ಞಾನ ಕೌಶಲ್ಯ ಹೆಚ್ಚಿಸಿಕೊಳ್ಳುವ ಜೊತೆಗೆ ನಿರಂತರ ಕಲಿಕಾಸಕ್ತಿ ಪೋಷಿಸಿಕೊಳ್ಳುತ್ತಿರಬೇಕು. ಆಗ ಮಾತ್ರ ಉದ್ಯೋಗಾವಕಾಶ ಸಾಧ್ಯತೆ ಹೆಚ್ಚು ಎಂದು ತಿಳಿಸಿದರು.
ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್, ಪಾಲಿಕೆ ಆಯುಕ್ತೆ ರೇಣುಕಾ, ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವನಗೌಡ, ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ, ಅಲ್ಪಸಂಖ್ಯಾತರ ಜಿಲ್ಲಾ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ್, ಪಾಲಿಕೆ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ್, ಕೆ.ಚಮನ್ ಸಾಬ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ವಿವಿಧ ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು. ಮೇಳದಲ್ಲಿ 1300 ಜನ ಸ್ಥಳದಲ್ಲಿ ನೋಂದಾಯಿಸಿದ್ದರೆ, 1050 ಜನ ಕ್ಯೂಆರ್ ಕೋಡ್ ಮೂಲಕ ನೋಂದಾಯಿಸಿದ್ದರು. ಜಿಲ್ಲೆಯಲ್ಲಿ ಸುಮಾರು 1 ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಈ ಮೇಳದಲ್ಲಿ ಸುಮಾರು 75 ಕಂಪನಿಗಳು ಉದ್ಯೋಗ, ತರಬೇತಿ ನೀಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಂಪನಿಗಳ ಮೇಳಕ್ಕೆ ಆಹ್ವಾನಿಸಿ, ಜಿಲ್ಲೆಯ ಯುವ ಜನತೆಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಿದ್ದೇವೆ.ಡಾ.ಎಂ.ವಿ.ವೆಂಕಟೇಶ ಜಿಲ್ಲಾಧಿಕಾರಿ.