ಎಂಡೋ ಪೀಡಿತರ ಚಿಕಿತ್ಸೆಗೆ ಕೇರಿಂಗ್ ಸೆಂಟರ್: ದಿನೇಶ್ ಗುಂಡೂರಾವ್

| Published : Feb 11 2024, 01:50 AM IST

ಎಂಡೋ ಪೀಡಿತರ ಚಿಕಿತ್ಸೆಗೆ ಕೇರಿಂಗ್ ಸೆಂಟರ್: ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಎಂಡೋ ಪೀಡಿತರ ಚಿಕಿತ್ಸೆಯ ಬಗ್ಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯ ಎಂಡೋಸಲ್ಪಾನ್ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಕೇರಿಂಗ್ ಸೆಂಟರನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಶನಿವಾರ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನ ನಡೆಸಿ ಮಾತನಾಡಿದರು.

ಎಂಡೋಸಲ್ಪನ್ ಪೀಡಿತರ ಆರೋಗ್ಯ ಮೇಲುಸ್ತುವಾರಿಗೆ ಪ್ರೋಗ್ರಾಂ ಆಫೀಸರ್ ಹಾಗೂ ವಾಹನದ ಬೇಡಿಕೆಯನ್ನೂ ಪೂರೈಸಲಾಗುವುದು ಎಂದವರು ಭರವಸೆ ನೀಡಿದರು.

ರಾಜ್ಯದಲ್ಲಿ ಖಾಲಿ ಇರುವ ಪ್ರಯೋಗಾಲಯ ತಜ್ಞರು, ಶ್ರುಶ್ರೂಕರ ಹುದ್ದೆಗಳನ್ನು ಭರ್ತಿ ಮಾಡಲು 800 ಮಂದಿಯ ನೇಮಕ ಪ್ರಕ್ರಿಯೆ ಚಾಲನೆಯಲ್ಲಿದ್ದು, ಅದರಲ್ಲಿ ಉಡುಪಿ ಜಿಲ್ಲೆಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದರು.

* ಆಸ್ಪತ್ರೆಗೆ ಅನುದಾನ: ಯಶ್ಪಾಲ್

ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಮಾತನಾಡಿ, ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆಗೆ ಅಗತ್ಯವಿರುವ ಅನುದಾನವನ್ನು ಒದಗಿಸುವಂತೆ ಹಾಗೂ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರವನ್ನು ಉನ್ನತ ದರ್ಜೆಗೆ ಏರಿಸಬೇಕು ಹಾಗೂ ಖಾಲಿ ಇರುವ ಆಂಬುಲೆನ್ಸ್‌ಗೆ ಅಗತ್ಯವಿರುವ ಚಾಲಕರನ್ನು ನೇಮಿಸಬೇಕು ಎಂದರು.

* ಡಯಾಲಿಸಿಸ್ ಸೆಂಟರ್‌ ತೆರೆಯಿರಿ: ಗಂಟಿಹೊಳೆ

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬೈಂದೂರಿಗೆ ತಾಲೂಕು ಮಟ್ಟದ ಆಸ್ಪತ್ರೆ, ಕೊಲ್ಲೂರು ಹಾಗೂ ಸಿದ್ದಾಪುರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತಿಕರಣಗೊಳಿಸಬೇಕು ಹಾಗೂ ಬೈಂದೂರಿನಲ್ಲಿ ಹಾಲಿ ಇರುವ ಆಸ್ಪತ್ರೆಗೆ ಡಯಾಲಿಸಿಸ್ ಘಟಕಗಳನ್ನು ತೆರೆಯಬೇಕು ಎಂದರು.

ಸಭೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್, ಆರೋಗ್ಯ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಬಿ.ಎಸ್., ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಜಿಲ್ಲಾ ಸರ್ಜನ್ ಡಾ.ವೀಣಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ.ಗಡಾದ್, ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.