ಸಾರಾಂಶ
ಕೂಡಲೇ ಕಾರ್ಯಪ್ರವೃತ್ತರಾದ ಬಂಡೀಪುರದಿಂದ ಅರಣ್ಯಾಧಿಕಾರಿಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಯಿಯಿಂದ ಬೇರ್ಪಟ್ಟಿದ್ದ ಮರಿಯೊಂದು ಆರೈಕೆ ಸಿಗದೇ ಅಸ್ವಸ್ಥಗೊಂಡಿದ್ದ ಆನೆಮರಿಗೆ ಅರಣ್ಯ ಇಲಾಖೆ ಚಿಕಿತ್ಸೆ ಕೊಟ್ಟು ಮತ್ತೇ ಅಮ್ಮನ ಮಡಿಲು ಸೇರಿಸಿದ ವಿಶೇಷ ಘಟನೆ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಲಯದಲ್ಲಿ ನಡೆದಿದೆ.ಅಂದಾಜು 2-3 ವರ್ಷದ ಗಂಡಾನೆ ಮರಿ ಮತ್ತೇ ಅಮ್ಮನ ಮಡಿಲು ಸೇರಿದ್ದು ಸದ್ಯ ಅರಣ್ಯ ಇಲಾಖೆ ಮರಿ ಮೇಲೆ ನಿರಂತರ ನಿಗಾ ಇಟ್ಟಿದೆ. ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10 ರಂದು ಇಲಾಖಾ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಜಯಣ್ಣ ಎಂಬುವವರ ಜಮೀನಿನ ಆನೆಮರಿ ಅಸ್ವಸ್ಥಗೊಂಡಿರುವುದು ಕಂಡುಬಂದಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಬಂಡೀಪುರದಿಂದ ಅರಣ್ಯಾಧಿಕಾರಿಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ.ಆದರೆ, ಅಷ್ಟರಲ್ಲಾಗಲೇ ಮರಿ ಅರಸುತ್ತಾ ಬಂದ ತಾಯಿ ಆನೆ ಚಿಕಿತ್ಸೆ ಕೊಡಲು ಬಂದಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಹರಸಾಹಸದಿಂದ ಆ್ಯಂಟಿಬಯೋಟಿಕ್, ಕಬ್ಬಿನ ಜಲ್ಲೆಗಳು, ಹಸಿ ಹುಲ್ಲುಗಳನ್ನು ಕೊಟ್ಟು ಆರೈಕೆ ಮಾಡಿದ್ದರು.
ಮಂಗಳವಾರ ಸಂಜೆ ತನಕವೂ ಆರೈಕೆ ಮುಂದುವರೆಸಿ ಮರಿ ಚೇತರಿಸಿಕೊಳ್ಳುತ್ತಿದ್ದಂತೆ ಅಮ್ಮನ ಮಡಿಲಿಗೆ ಮರಿಯನ್ನು ಒಪ್ಪಿಸಿದ್ದಾರೆ. ಜೊತೆಗೆ, 24 ತಾಸು ಕೂಡ ಮರಿ ಮೇಲೆ ನಿಗಾ ಇಡಲು ಬಿಆರ್ ಟಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.